ಯಾವುದೇ ಪರಿಣಿತಿ-ಪ್ರಮಾಣ ಪತ್ರ ಇಲ್ಲದಿದ್ದರೂ `ನುರಿತ ವೈದ್ಯ’ ಎಂದು ಬಿಂಬಿಸಿಕೊoಡಿದ್ದ ನಕಲಿ ವೈದ್ಯ ವಿನೋದ ಗಾಜಗಾರ್ ವಿರುದ್ಧ ಸರ್ಕಾರಿ ವೈದ್ಯಾಧಿಕಾರಿಗಳ ತಂಡ ಕಾನೂನು ಕ್ರಮ ಜರುಗಿಸಿದೆ. ಮುಂಡಗೋಡಿನ ಸಾಲಗಾಂವದಲ್ಲಿ ಮನೆಯನ್ನೇ ಆಸ್ಪತ್ರೆಯನ್ನಾಗಿಸಿಕೊಂಡಿದ್ದ ವಿನೋದ ಗಾಜಗಾರ್’ನ ನಕಲಿ ದವಾಖಾನೆಗೆ ಇದೀಗ ಬೀಗ ಜಡಿಯಲಾಗಿದೆ.
ಗುರುವಾರ ಕೆ ಪಿ ಎಂ ಇ ಪ್ರಾಧಿಕಾರದವರು ಮುಂಡಗೋಡಿನ ನಾಲ್ಕು ಕಡೆ ದಾಳಿ ನಡೆಸಿದರು. ಈ ವೇಳೆ ಒಬ್ಬ ನಕಲಿ ವೈದ್ಯ ಸಿಕ್ಕಿ ಬಿದ್ದಿದ್ದು, ಮೂವರು ವೈದ್ಯರು ವಿವಿಧ ಲೋಪ ಎಸಗಿರುವುದು ಗಮನಕ್ಕೆ ಬಂದಿತು. ಈ ಹಿನ್ನಲೆ ಆ ನಾಲ್ಕು ಮಳಿಗೆಗಳಿಗೆ ವೈದ್ಯಾಧಿಕಾರಿಗಳ ತಂಡ ಬೀಗ ಜಡಿದು, ಆಸ್ಪತ್ರೆಯನ್ನು ಸೀಲ್ ಮಾಡಿದರು.
ಹುಬ್ಬಳ್ಳಿ ಶಿರಸಿ ರಸ್ತೆಯಲ್ಲಿ ಮಕ್ಕಳ ಆಸ್ಪತ್ರೆ ನಡೆಸುತ್ತಿದ್ದ ಡಾ ಕಿರಣ ಹುಬ್ಬಳ್ಳಿ, ಶಿರಸಿ ರಸ್ತೆಯಲ್ಲಿ ಪಾಂಡುರoಗ ಕ್ಲಿನಿಕ್ ನಡೆಸುತ್ತಿದ್ದ ಡಾ ಅಭಯ ಇಂಗ್ಳೆ ಹಾಗೂ ಟಿಡಿಬಿ ರಸ್ತೆಯಲ್ಲಿ ರೋಣ ಮೆಡಿಕಲ್ಸ ನಡೆಸುತ್ತಿದ್ದ ಡಾ ಭಾಸ್ಕರ ರಾವ್ ಆಸ್ಪತ್ರೆ ಮೇಲೆ ವೈದ್ಯಾಧಿಕಾರಿಗಳು ದಾಳಿ ಮಾಡಿದರು. ಅಲ್ಲಿಯೂ ಅನೇಕ ನ್ಯೂನ್ಯತೆಗಳಿದ್ದ ಕಾರಣ ನೋಟಿಸ್ ಜಾರಿ ಮಾಡಿ, ಕ್ಲಿನಿಕ್ ಬಂದ್ ಮಾಡಿಸಿದರು.
ವೈದ್ಯರು ಕೆಪಿಎಂಇ ಕಾಯ್ದೆ ಅಡಿ ನೋಂದಣಿ ಇಲ್ಲದ ವೈದ್ಯರಿಗೆ ನೋಂದಣಿ ಬಗ್ಗೆ ಮಾಹಿತಿ ನೀಡಿ, ಅರಿವು ಮೂಡಿಸಿದರು. ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ ಅಶ್ವಿನಿ ಬೋರ್ಕರ್, ತಾಲೂಕಾ ವೈದ್ಯಾಧಿಕಾರಿ ಡಾನರೇಂದ್ರ ಪವಾರ್, ಆಯುಷ್ ವೈದ್ಯಾಧಿಕಾರಿ ಸಂಜೀವ ಗಲಗಲಿ, ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾದಿಕಾರಿಗಳಾದ ಭರತ್ ಡಿ ಟಿ, ಡಾ ಸ್ವರೂಪರಾಣಿ ಪಾಟಿಲ್ ದಾಳಿಯಲ್ಲಿದ್ದರು. ಪೊಲೀಸ್ ಸಿಬ್ಬಂದಿ ಜಿ ವೈ ಹೊಂಗಲ, ಸಿಬಿ ರಾಥೋಡ್ ದಾಳಿ ನಡೆಸಿದ ವೈದ್ಯಾಧಿಕಾರಿಗಳಿಗೆ ಭದ್ರತೆ ಒದಗಿಸಿದರು.