ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕಾರವಾರದ ನರೇಂದ್ರ ದೇಸಾಯಿ ಅವರಿಗೆ `ದೀನಬಂಧು ದತ್ತನಿಧಿ’ ಪ್ರಶಸ್ತಿ ದೊರೆತ ಹಿನ್ನಲೆ ಅಸ್ನೋಟಿಯ ಶಿವಾಜಿ ವಿದ್ಯಾ ಮಂದಿರದವರು ಅವರನ್ನು ಗೌರವಿಸಿದ್ದಾರೆ.
ನರೇಂದ್ರ ದೇಸಾಯಿ ಅವರು ತಾಯಿ ಹೆಸರಿನಲ್ಲಿ `ಮಾತೋಶ್ರೀ ಸರೋಜಾ ಬಾಳಾ ದೇಸಾಯಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್’ ಸ್ಥಾಪಿಸಿ ಅದರ ಮೂಲಕ ಎರಡು ದಶಕಗಳಿಂದ ವಿದ್ಯಾರ್ಥಿಗಳಿಗೆ ನೆರವು ನೀಡುತ್ತಿದ್ದಾರೆ. ವಿಕಲಚೇತನರು, ಅನಾರೋಗ್ಯಕ್ಕೆ ಒಳಗಾದವರು ಸೇರಿ ಅನೇಕರಿಗೆ ಅವರು ಆರ್ಥಿಕ ಸಹಾಯ ಮಾಡಿದ್ದಾರೆ. ಧಾರ್ಮಿಕ ಚಿಂತನೆಯನ್ನು ಹೊಂದಿರುವ ಅವರು 12 ಗುಂಟೆ ಕ್ಷೇತ್ರವನ್ನು ದೇವಾಲಯಕ್ಕೆ ದಾನವಾಗಿ ನೀಡಿದ್ದಾರೆ. ಕಾರವಾರ ನಗರದಲ್ಲಿ ಬೀದಿ ದೀಪ ಅಳವಡಿಕೆ, ಅಂಗವಿಕಲರ ಸ್ವ ಉದ್ಯೋಗಕ್ಕೆ ನೆರವು, ಶಾಲಾ-ಕಾಲೇಜುಗಳಿಗೆ ಪರಿಕ್ಕರಗಳ ವಿತರಣೆಯನ್ನು ಮಾಡುತ್ತಿದ್ದಾರೆ. ಈ ಸೇವೆ ಗುರುತಿಸಿ ಅವರಿಗೆ ದೀನಬಂಧು ದತ್ತನಿಧಿ ಪ್ರಶಸ್ತಿ ದೊರೆತಿದೆ.
ದೀನಬಂಧು ದತ್ತನಿಧಿ ಪ್ರಶಸ್ತಿ ಪರುಸ್ಕೃತ ನರೇಂದ್ರ ದೇಸಾಯಿ ಅವರಿಗೆ ಅಸ್ನೋಟಿ ಶಿವಾಜಿ ವಿದ್ಯಾ ಮಂದಿರದವರು ಪ್ರೀತಿಯಿಂದ ಸನ್ಮಾನಿಸಿದರು. ಈ ವೇಳೆ ಹಿರಿಯರಾದ ಕೃಷ್ಣಾನಂದ ಸಾಳುಂಕೆ ಅವರು ನರೇಂದ್ರ ದೇಸಾಯಿ ಅವರ ವ್ಯಕ್ತಿತ್ವವನ್ನು ಕೊಂಡಾಡಿದರು. ನರೇಂದ್ರ ದೇಸಾಯಿ ಸಹ `ನನ್ನ ತಾಯಿಯೇ ನನಗೆ ಆದರ್ಶ’ ಎಂಬ ಮಾತನ್ನು ಪುನರುಚ್ಚರಿಸಿದರು. ಕೆನರಾ ಬ್ಯಾಂಕ್ ವ್ಯವಸ್ಥಾಪಕರಾದ ಗೌಡೇಶ ಕೆ ಟಿ, ಶಾಲಾ ಮುಖ್ಯಾಧ್ಯಾಪಕ ದಿನೇಶ ಗಾಂವಕರ್ ಮಾತನಾಡಿದರು.
ಶಾಲೆಯ ಶಿಕ್ಷಕರಾದ ವಿಜಯಕುಮಾರ್ ನಾಯ್ಕ, ಸಂತೋಷ ಕಾಂಬಳೆ, ಜೆ ಬಿ ತಿಪ್ಪೇಸ್ವಾಮಿ, ರೂಪಾಲಿ ಸಾವಂತ ಹಾಗೂ ಮಹದೇವ ಅಸ್ನೋಟಕರ ಅವರು ನರೇಂದ್ರ ದೇಸಾಯಿ ಅವರಿಗೆ ಶುಭಕೋರಿದರು. ರಿದೀಶಾ ಸಂಗಡಿಗರು ಪ್ರಾರ್ಥಿಸಿದರು. ಗಣೇಶ ಎನ್ ಬಿಷ್ಟಣ್ಣನವರ ಸ್ವಾಗತಿಸಿದರು.