ಹೊನ್ನಾವರದ ರಾಘು ಗೆಳೆಯರ ಬಳಗದವರು ಕಳೆದ ಎಂಟು ವರ್ಷಗಳಿಂದ ಹೋಳಿ ಹಬ್ಬದ ಹಣವನ್ನು ಅಶಕ್ತರಿಗೆ ನೀಡುವ ಮೂಲಕ ನೆರವಾಗುತ್ತಿದ್ದಾರೆ. ಈ ವರ್ಷವೂ ಒಟ್ಟು 33 ಸಾವಿರ ರೂಪಾಯಿಗಳನ್ನು ಸ್ನೇಹಿತರ ಬಳಗದವರು ನಿರ್ಗತಿಕರಿಗೆ ನೀಡಿದ್ದಾರೆ.
ಹೋಳಿ ಹಬ್ಬದ ಅಂಗವಾಗಿ ಗೆಳೆಯರ ಬಳಗದವರು ಮನೆ ಮನೆಗೆ ತೆರಳಿ ಮನರಂಜನೆ ನೀಡುತ್ತಾರೆ. ಆ ವೇಳೆ ಮನೆಯವರು ಸಹ ಕಾಣಿಕೆ ನೀಡಿ ಗೌರವಿಸುತ್ತಾರೆ. ವಿಭಿನ್ನವಾಗಿ ಹೋಳಿ ಹಬ್ಬ ಆಚರಿಸುತ್ತ ಬಂದಿರುವ ರಾಘು ಗೆಳೆಯರ ಬಳಗದವರು ಪ್ರತಿ ಬಾರಿಯೂ ಒಳ್ಳೆಯ ಕೆಲಸ ಮಾಡುತ್ತ ಬಂದಿದ್ದಾರೆ. ಅದನ್ನು ಈ ವರ್ಷವೂ ಮುಂದುವರೆಸಿದ್ದು, ನಿರ್ಗತಿಕ ಕುಟುಂಬಗಳಿಗೆ ಆಸರೆಯಾಗಿದ್ದಾರೆ.
ಈ ವರ್ಷ ಕಾಸರಕೋಡ ಟೊಂಕ ಭಾಗದ ಮಾದೇವ ತಾಂಡೇಲ್ ಮತ್ತು ದಾಮೋದರ ತಾಂಡೇಲ್ ಕುಟುಂಬದವರನ್ನು ರಾಘು ಬಳಗದವರು ಭೇಟಿ ಮಾಡಿದರು. ಅವರ ಸಮಸ್ಯೆ ಆಲಿಸಿ ಆರ್ಥಿಕ ನೆರವು ನೀಡಿದರು. ಈ ಹಣವನ್ನು ಉತ್ತಮ ಉದ್ದೇಶಕ್ಕೆ ಬಳಸಿ ಎಂದು ಕಿವಿಮಾತು ಹೇಳಿದರು.