ಸಿದ್ದಾಪುರದಲ್ಲಿ ಅತ್ಯುತ್ತಮ ಕಾರ್ಮಿಕ ಎಂದೇ ಹೆಸರುಪಡೆದಿದ್ದ ನಾರಾಯಣ ನಾಯ್ಕ ಸರಾಯಿ ಜೊತೆ ವಿಷ ಸೇವಿಸಿ ಸಾವನಪ್ಪಿದ್ದಾರೆ.
ಸಿದ್ದಾಪುರದ ಕಾನಗೋಡಿನಲ್ಲಿ ನಾರಾಯಣ ನಾಯ್ಕ (55) ವಾಸವಾಗಿದ್ದರು. ಗೌಂಡಿ ಕೆಲಸ ಮಾಡುವ ಅವರು ನೂರಾರು ಕಟ್ಟಡ ನಿರ್ಮಾಣಕ್ಕಾಗಿ ಶ್ರಮಿಸಿದ್ದರು. ಒಂದು ದಿನವೂ ರಜೆ ಮಾಡದೇ ವರ್ಷವಿಡೀ ಅವರು ಕೆಲಸಕ್ಕೆ ಹೋಗುತ್ತಿದ್ದರು.
ಒಂದು ತಿಂಗಳ ಹಿಂದೆ ಅವರ ಎಡಭಾಗದ ಕೈ ಊನಗೊಂಡಿತು. ಕೈಯಲ್ಲಿ ಬಾಹು ಕಾಣಿಸಿಕೊಂಡಿದ್ದರಿoದ ಕೆಲಸ ಮಾಡಲು ಆಗುತ್ತಿರಲಿಲ್ಲ. ಅದಾಗಿಯೂ ಅವರು ಕೆಲಸ ಮುಂದುವರೆಸಲು ಪ್ರಯತ್ನಿಸಿದ್ದು, ಕೈ ನೋವು ಜಾಸ್ತಿಯಾಯಿತು. ಹೀಗಾಗಿ ಅನಿವಾರ್ಯವಾಗಿ ಅವರು ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದರು.
ವಿಪರೀತ ನೋವಿನಲ್ಲಿದ್ದ ಅವರು ವಿವಿಧ ಔಷಧಿಗಳನ್ನು ಸೇವಿಸಿದರು. ಲೇಹಗಳನ್ನು ಕೈಗೆ ಹಚ್ಚಿದರು. ಆದರೆ, ಕೈ ನೋವಿನ ಸಮಸ್ಯೆ ಮಾತ್ರ ಬಗೆಹರಿಯಲಿಲ್ಲ. ಕೆಲಸಕ್ಕೆ ಹೋಗಲಾಗದ ತಲೆಬಿಸಿಯಲ್ಲಿ ಅವರು ಮಾನಸಿಕವಾಗಿಯೂ ಸಾಕಷ್ಟು ನೋವು ಅನುಭವಿಸಿದರು.
ಕೆಲಸಕ್ಕೆ ತೆರಳದೇ ಸುಮ್ಮನೆ ಕೂರಲು ಆಗದ ಅವರು ಸದಾ ಚಡಪಡಿಕೆಯಲ್ಲಿರುತ್ತಿದ್ದರು. ಕೈ ನೋವಿನ ಬಗ್ಗೆಯೂ ಸಾಕಷ್ಟು ಕಡೆ ಹೇಳಿಕೊಂಡಿದ್ದರು. ಮಾನಸಿಕವಾಗಿ ಕುಗ್ಗಿದ ಅವರು ಮಾರ್ಚ 18ರಂದು ಸರಾಯಿ ಜೊತೆ ಇರುವೆಗೆ ಹೊಡೆಯುವ ಔಷಧಿ ಸೇರಿಸಿ ಸೇವಿಸಿದರು. ಅಸ್ವಸ್ಥರಾದ ನಾರಾಯಣ ನಾಯ್ಕರನ್ನು ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.
ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ರವಾನಿಸಲಾಯಿತು. ಆದರೆ, ಮಾರ್ಚ 20ರಂದು ಅವರು ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವನಪ್ಪಿದರು. ಈ ಬಗ್ಗೆ ಅವರ ತಮ್ಮ ಮಹಾದೇವ ನಾಯ್ಕ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.