ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಕಳಚೆ ಭೂಕುಸಿತ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದು, ಈ ವೇಳೆ ಹಲವರು ಪುನರ್ವಸತಿ ಕಲ್ಪಿಸುವಂತೆ ಒತ್ತಾಯಿಸಿದರು. ಇದಕ್ಕೆ ವಿರುದ್ಧವಾಗಿ ಇನ್ನೂ ಕೆಲವರು `ಪುನರ್ವಸತಿ ಬದಲು ಪರಿಹಾರ ಕೊಡಿ’ ಎಂದು ಆಗ್ರಹಿಸಿದರು.
ಈ ಬಗ್ಗೆ ನಿರ್ಣಯ ಕೈಗೊಳ್ಳಲು ಶಿರಸಿ ಉಪವಿಭಾಗಾಧಿಕಾರಿ ಕಾವ್ಯರಾಣಿ ಅವರ ಅಧ್ಯಕ್ಷತೆಯಲ್ಲಿ ಪ್ರತ್ಯೇಕ ಗ್ರಾಮಸಭೆ ನಡೆಸುವಂತೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಮೌಖಿಕ ಆದೇಶ ನೀಡಿದರು. ಸಂತ್ರಸ್ತರಿಗೆ ಪುನರ್ವಸತಿಯಾ ಅಥವಾ ಪರಿಹಾರವಾ? ಎಂಬ ವಿಷಯದಲ್ಲಿನ ಗೊಂದಲವನ್ನು ಆ ಗ್ರಾಮಸಭೆಯಲ್ಲಿ ಬಗೆಹರಿಸಿಕೊಳ್ಳುವಂತೆ ಅವರು ಸೂಚಿಸಿದರು.
ಗುರುವಾರ ಯಲ್ಲಾಪುರಕ್ಕೆ ಭೇಟಿ ನೀಡಿ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಮೊದಲು ನೇರವಾಗಿ ಕಳಚೆಗೆ ತೆರಳಿದರು. ಅಲ್ಲಿನ ಕಮಲಾಕರ ಗಾಂವ್ಕರ್ ಅವರ ಮನೆ ಹಾಗೂ ಸುತ್ತಲಿನ ಪರಿಸರ ವೀಕ್ಷಿಸಿದರು. ತೋಟಕ್ಕೆ ತೆರಳಿ ಅಲ್ಲಾದ ಹಾನಿಯ ಬಗ್ಗೆ ಅಂದಾಜಿಸಿದರು. ರಸ್ತೆ ಬದಿಯ ಇನ್ನೆರಡು ತೋಟಗಳನ್ನು ವೀಕ್ಷಿಸಿ ಹಾನಿ ತಡೆಗೆ ಕೈಗೊಳ್ಳಬಹುದಾದ ಮಾರ್ಗಗಳ ಬಗ್ಗೆ ತಹಶೀಲ್ದಾರ್ ತಹಶೀಲ್ದಾರ್ ಯಲ್ಲಪ್ಪ ಗೋಣೆನ್ನವರ್ ಹಾಗೂ ಕಂದಾಯ ನಿರೀಕ್ಷಕಿ ಜ್ಯೋತಿ ನಾಯ್ಕ ಅವರೊಂದಿಗೆ ಚರ್ಚಿಸಿದರು. ತಳಕೆಬೈಲ್ ಭೂ ಕುಸಿತ ಸ್ಥಳ ವೀಕ್ಷಣೆ ಮಾಡಿದ ಅವರು ನಂತರ ಬೀಗಾರ್-ಬಾಗಿನಕಟ್ಟಾ ರಸ್ತೆ ಸಂಪರ್ಕ ಕಡಿತವಾಗಿರುವುದನ್ನು ಗಮನಿಸಿದರು.
ಅಲ್ಲಿದ್ದ ಜನ ತಮ್ಮ ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳ ಮುಂದಿಟ್ಟರು. `ಇಡೀ ಊರನ್ನು ಸ್ಥಳಾಂತರಿಸಲು ಕಾನೂನಿನಲ್ಲಿ ಅವಕಾಶವಿದ್ದು, ಕೆಲ ಕುಟುಂಬಗಳಿಗೆ ಮಾತ್ರ ಬೇರೆಡೆ ವಸತಿ ಕಲ್ಪಿಸುವುದು ಕಷ್ಟ. ವಸತಿಗೆ ಬೇರೆ ಜಾಗ ನೀಡಿ, ಪರಿಹಾರ ಕೊಡುವುದರ ಜೊತೆ ಇಲ್ಲಿನ ತೋಟವನ್ನು ಹಾಗೇ ಬಿಡಿ ಎಂಬ ಬೇಡಿಕೆ ಈಡೇರಿಕೆಗೆ ಅವಕಾಶವಿಲ್ಲ’ ಎಂದು ಅಲ್ಲಿದ್ದವರಿಗೆ ತಿಳಿಹೇಳಿದರು. `ಗ್ರಾಮಸ್ಥರು ಒಗ್ಗಟ್ಟಿನಿಂದ ನಿರ್ಣಯ ಕೈಗೊಂಡರೆ ಮಾತ್ರ ಅರಣ್ಯ ಭೂಮಿಯನ್ನು ಕಂದಾಯ ಭೂಮಿಯನ್ನಾಗಿ ಪರಿವರ್ತಿಸಿ ಪುನರ್ವಸತಿ ಸಾಧ್ಯ’ ಎನ್ನುವದರ ಬಗ್ಗೆ ವಿವರಿಸಿದರು. ಗ್ರಾಮಸ್ಥರ ಮನವೊಲೈಸಿ ಸರಿಯಾದ ನಿರ್ಣಯ ಕೈಗೊಳ್ಳಲು ಸಹಾಯ ಮಾಡುವಂತೆ ಅಧೀನ ಅಧಿಕಾರಿಗಳಿಗೆ ತಿಳಿಸಿದರು.
ಅದಾದ ನಂತರ ಯಲ್ಲಾಪುರದ ಟಿ ಎಂ ಎಸ್ ಪಕ್ಕದ ನ್ಯಾಯಬೆಲೆ ಅಂಗಡಿ ಗೋದಾಮಿಗೆ ಭೇಟಿ ನೀಡಿ ಪರಿಶೀಲಿಸಿದರು. ತಹಶೀಲ್ದಾರ್ ಕಚೇರಿಯ ರೆಕಾರ್ಡ ರೂಂ’ಗೆ ತೆರಳಿ ದಾಖಲೆಗಳನ್ನು ಗಮನಿಸಿದರು. ಗ್ರಾಮ ಆಡಳಿತಾಧಿಕಾರಿಗಳಿಗೆ ಅಗತ್ಯವಿರುವ ಕಪಾಟುಗಳನ್ನು ಹಸ್ತಾಂತರಿಸಿದರು. ಗ್ರಾಮ ಆಡಳಿತಾಧಿಕಾರಿ ದೀಪಿಕಾ ಹೊಸ್ಮನಿ, ಪಿಡಿಓ ಗಂಗಾಧರ ಭಟ್ಟ, ತಾ ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ ಧನವಾಡಕರ್ ಜೊತೆಗಿದ್ದರು.