ದಾಂಡೇಲಿಯ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯಲ್ಲಿ ಸಾಲ ಮಾಡಿದ್ದ ವ್ಯಾಪಾರಿ ಒಬಯ್ಯ ಉಮದಿ ಅವರಿಗೆ ಅನ್ಯಾಯವಾಗಿದೆ. 2017ರಲ್ಲಿಯೇ ಅವರು ಬಡ್ಡಿ ಜೊತೆ ಪೂರ್ತಿ ಸಾಲ ಪಾವತಿ ಮಾಡಿದ್ದರೂ ಮತ್ತೆ 1.46 ಲಕ್ಷ ರೂ ಪಾವತಿಸುವಂತೆ ಸೊಸೈಟಿ ನೋಟಿಸು ನೀಡಿದೆ!
ದಾಂಡೇಲಿಯ ಜಿ ಎನ್ ರಸ್ತೆಯಲ್ಲಿ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಕಾರ್ಯ ನಿರ್ವಹಿಸುತ್ತಿದೆ. ದಾಂಡೇಲಿ ವಿಜಯ ನಗರದ ಒಬಯ್ಯ ಉಮದಿ ಅವರು ನಾಲ್ಕು ಚಕ್ರದ ವಾಹನ ಖರೀದಿಗೆ ಈ ಸೊಸೈಟಿಯಲ್ಲಿ 4.5 ಲಕ್ಷ ರೂ ಸಾಲ ಮಾಡಿದ್ದರು. ಸಾಲ ಪಡೆಯುವಾಗ ಸೊಸೈಟಿಯವರು ಠೇವಣಿ, ಶೇರು ಹಾಗೂ LIC ವಿಮೆ, ಕಾಗದಪತ್ರ ಶುಲ್ಕ ಎಂದು 69483 ರೂ ಕಡತ ಮಾಡಿಕೊಂಡಿದ್ದರು.
ಸಾಲ ತೀರಿಸುವ ಹೊಣೆಹೊತ್ತ ಒಬಯ್ಯ ಉಮದಿ ಅವರು ನಿರಂತರವಾಗಿ ಅಸಲು ಹಾಗೂ ಬಡ್ಡಿ ಪಾವತಿಸಿದ್ದರು. 2017ರ ಫೆ 16ರೊಳಗೆ ಸಂಪೂರ್ಣ ಸಾಲವನ್ನು ಬಡ್ಡಿಸಹಿತ ತೀರಿಸಿದ್ದರು. ಜೊತೆಗೆ ಸಾಲ ಮುಗಿದ ಬಗ್ಗೆ ಅವರು ಸೊಸೈಟಿಯಿಂದ ಪ್ರಮಾಣ ಪತ್ರವನ್ನು ಸಹ ಪಡೆದಿದ್ದರು. ಸಾಲ ಚುಕ್ತಾ ಪ್ರಮಾಣ ಪತ್ರದ ಜೊತೆ ಬ್ಯಾಂಕಿಗೆ ತೆರಳಿದ ಅವರು ಸಾಲ ಪಡೆಯುವಾಗ ಕಡತ ಮಾಡಿಕೊಂಡಿದ್ದ ಹಣ ಮರುಪಾವತಿಗೆ ಕೋರಿದರು.
ಆದರೆ, ಸೊಸೈಟಿಯವರು ಆ ಹಣ ನೀಡಲು ಒಪ್ಪಲಿಲ್ಲ. ಕಾರಣ ಕೇಳಿದಾಗ ಮತ್ತೆ 146271ರೂ ಪಾವತಿಸುವಂತೆ ಸೂಚನೆ ನೀಡಿದರು. ಈ ಬಗ್ಗೆ ಸೊಸೈಟಿಯವರು ನೋಟಿಸ್ ಸಹ ನೀಡಿದರು. ಈಗಾಗಲೇ ಎಲ್ಲಾ ಹಣ ಪಾವತಿಸಿದ ನಂತರವೂ ಮತ್ತೆ ನೋಟಿಸ್ ನೀಡಿದನ್ನು ಪ್ರಶ್ನಿಸಲು ಒಬಯ್ಯ ಉಮದಿ ಅವರು ಸೊಸೈಟಿಗೆ ಹೋದರು. ಆದರೆ, ಸೊಸೈಟಿ ಸಿಬ್ಬಂದಿ ಹಾರಿಕೆ ಉತ್ತರ ನೀಡಿ ತಪ್ಪಿಸಿಕೊಂಡರು. ಸೊಸೈಟಿಯ ಮ್ಯಾನೇಜರ್ ಅಂತೂ ಒಬಯ್ಯ ಉಮದಿ ಅವರನ್ನು ಕಂಡ ತಕ್ಷಣ ಅಡಗಲು ಶುರು ಮಾಡಿದರು.
ಎಷ್ಟು ಸಲ ಪ್ರಯತ್ನಿಸಿದರೂ ಸೊಸೈಟಿ ಮ್ಯಾನೇಜರ್ ಒಬಯ್ಯ ಉಮದಿ ಅವರ ಕೈಗೆ ಸಿಗಲಿಲ್ಲ. ಸಿಬ್ಬಂದಿ ಸಹ ಸರಿಯಾಗಿ ಮಾತನಾಡಿಸಲಿಲ್ಲ. ಹೀಗಾಗಿ ಆಘಾತಕ್ಕೆ ಒಳಗಾದ ಒಬಯ್ಯ ಉಮದಿ ಅವರು ದಾಂಡೇಲಿ ಪೊಲೀಸ್ ಠಾಣೆಗೆ ತೆರಳಿದರು. ಎಲ್ಲಾ ದಾಖಲೆಗಳನ್ನು ತೋರಿಸಿ ತಮಗಾದ ಅನ್ಯಾಯವನ್ನು ವಿವರಿಸಿದರು. ಬ್ಯಾಂಕ್ ಮ್ಯಾನೇಜರ್ ಹಾಗೂ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಸಾಲ ವಿಭಾಗ ಸಿಬ್ಬಂದಿ ಕಿಶನ್ ಉಪ್ಪಾರ್ ವಿರುದ್ಧ ಪ್ರಕರಣ ದಾಖಲಿಸಿದರು.