ಶಿರಸಿಯಲ್ಲಿ ಗಾಂಜಾ ಮಾರಾಟ ಹಾಗೂ ಸೇವನೆ ಮಾಡುವವರ ವಿರುದ್ಧ ಪೊಲೀಸರು ಸಮರ ಸಾರುತ್ತಿದ್ದು, ಗುರುವಾರ ಗಾಂಜಾ ನಶೆಯಲ್ಲಿದ್ದ ಹರೀಶ ನಾಯ್ಕರನ್ನು ಬಂಧಿಸಿದ್ದಾರೆ. ಶುಕ್ರವಾರ ಗಾಂಜಾ ಮಾರಾಟ ಮಾಡುತ್ತಿದ್ದ ಅಜಾಜ್ ಮಕ್ಬೂಲ್ ಅಹ್ಮದ್ ಶೇಖ್‌ರನ್ನು ವಶಕ್ಕೆ ಪಡೆದಿದ್ದಾರೆ.
ನಿಲೆಕಣಿ ಮೀನು ಮಾರುಕಟ್ಟೆ ಪಕ್ಕದ ಲಿಂಗದಕೋಣ ರಸ್ತೆ ಹತ್ತಿರ ಹರೀಶ ಮಂಜುನಾಥ ನಾಯ್ಕ ಗಾಂಜಾ ನಶೆಯಲ್ಲಿದ್ದಾಗ ಪೊಲೀಸರು ದಾಳಿ ನಡೆಸಿದ್ದರು. ಅಮಲಿನಲ್ಲಿದ್ದ ಹರೀಶ ನಾಯ್ಕರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ದೃಢವಾಗಿತ್ತು. ಈ ಹಿನ್ನಲೆ ಹರೀಶ ನಾಯ್ಕರನ್ನು ಪೊಲೀಸರು ಬಂಧಿಸಿದರು.
ಶುಕ್ರವಾರ ಶಿರಸಿ ನಗರದ ಮುಸ್ಲಿಂಗಲ್ಲಿಯ ಅಜಾಜ್ ಮಕ್ಬೂಲ್ ಅಹ್ಮದ್ ಶೇಖ್ ಗಾಂಜಾ ವ್ಯಾಪಾರ ಮಾಡುತ್ತಿದ್ದಾಗ ನಗರ ಠಾಣೆ ಪೊಲೀಸರಿಗೆ ಸಿಕ್ಕಿ ಬಿದ್ದರು. ಬೈಕಿನಲ್ಲಿ ಗಾಂಜಾ ಸರಬರಾಜು ಮಾಡುತ್ತಿರುವುದನ್ನು ಪೊಲೀಸರು ಪತ್ತೆ ಮಾಡಿದರು. ಶಿರಸಿ ನಗರದ ಕಲ್ಕುಣಿ ರಸ್ತೆಯ ಕಟ್ಟಿಗೆ ಡಿಪೋ ಹತ್ತಿರ ಗಾಂಜಾ ಜೊತೆ ಅಜಾಜ್ ಶೇಖರನ್ನು ಬಂಧಿಸಿದರು.
ಅಜಾಜ್ ಶೇಖ್ ಬಳಿ 15 ಸಾವಿರ ರೂ ಮೌಲ್ಯದ 154 ಗ್ರಾಂ ಗಾಂಜಾ, ಡಿಜಿಟಲ್ ತೂಕದ ಯಂತ್ರ, 1800ರೂ ಹಣ ಸಿಕ್ಕಿತು. ಜೊತೆಗಿದ್ದ ಬೈಕನ್ನು ಜಪ್ತು ಮಾಡಿದ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಿದರು.