ಶಿರಸಿ ನಗರಕ್ಕೆ ಕುಡಿಯುವ ನೀರು ಪೂರೈಸುತ್ತಿದ್ದ ಕಬ್ಬಿಣದ ಪೈಪ್ ಕಳ್ಳತನ ವಿಷಯ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ನಗರಸಭೆ ಸದಸ್ಯರಿಗೆ ಮುಜುಗರ ತರಿಸಿದೆ. ಪೈಪ್ ಕಳ್ಳತನದಲ್ಲಿ ನಗರಸಭೆ ಸದಸ್ಯರೇ ಶಾಮೀಲಾಗಿರುವ ಬಗ್ಗೆ ಮಾತು ಕೇಳಿಬಂದಿದ್ದರಿoದ ಸಮಗ್ರ ತನಿಖೆಗೆ ನಗರಸಭೆ ಜನಪ್ರತಿನಿಧಿಗಳು ಪಟ್ಟು ಹಿಡಿದಿದ್ದಾರೆ.
ಮಾಧ್ಯಮವೊಂದು ವರದಿ ಮಾಡದೇ ಇದ್ದಿದ್ದರೆ ಲಕ್ಷಾಂತರ ರೂ ಮೌಲ್ಯದ ಪೈಪ್ ಕಳ್ಳತನ ಪ್ರಕರಣ ಬೆಳಕಿಗೆ ಬರುತ್ತಿರಲಿಲ್ಲ. ಪ್ರಾಮಾಣಿಕ ಜನಪ್ರತಿನಿಧಿಗಳ ಒತ್ತಡ ಇಲ್ಲದಿದ್ದರೆ ನಗರಸಭೆ ಅಧಿಕಾರಿಗಳು ಈ ಬಗ್ಗೆ ಪೊಲೀಸ್ ದೂರು ಸಹ ದಾಖಲಿಸುತ್ತಿರಲಿಲ್ಲ. ಪ್ರಕರಣ ದಾಖಲಾಗದೇ ಇದ್ದಿದ್ದರೆ ಪೊಲೀಸರು ಸಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪೈಪ್ ಕಳ್ಳತನಕ್ಕೆ ಬಳಸಿದ್ದ ಎರಡು ಜೆಸಿಬಿ, ಒಂದು ಕ್ರೇನ್’ನ್ನು ವಶಕ್ಕೆ ಪಡೆಯುತ್ತಿರಲಿಲ್ಲ. ಸದ್ಯ ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಶಿವಮೊಗ್ಗದ ಗುಜುರಿ ವ್ಯಾಪಾರಿ ಜಿಕ್ರಿಯಾ ಸಯ್ಯದ್ ಸತ್ಯ ಬಾಯ್ಬಿಟ್ಟರೆ ಶಾಮೀಲಾಗಿರುವ ನಗರಸಭೆ ಸದಸ್ಯರ ಹೆಸರು ಬಯಲಾಗಲಿದೆ. ಇದರಿಂದ ನಗರಸಭೆಯ ಉಳಿದ ಸದಸ್ಯರು ಆರೋಪ ಮುಕ್ತರಾಗಲಿದ್ದಾರೆ.
ಕಬ್ಬಿಣದ ಪೈಪ್ ಕಳ್ಳತನದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ನಗರಸಭೆ ಸದಸ್ಯ ತಮ್ಮದೇ ಪಕ್ಷದವನಾಗಿದ್ದರೂ ಆತನನ್ನು ಪಕ್ಷದೊಳಗೆ ಸೇರಿಸಿಕೊಳ್ಳಲು ಯಾವ ಪಕ್ಷವೂ ಸಿದ್ಧವಿಲ್ಲ. ಅದರಲ್ಲಿಯೂ ಬಿಜೆಪಿಗರು ಪಕ್ಷದಿಂದ ಉಚ್ಛಾಟನೆ ಮಾಡುವುದಾಗಿ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಇನ್ನೂ, ಕಾಂಗ್ರೆಸ್ಸಿಗರು ಸಹ ಪೈಪ್ ಕಳ್ಳತನ ಪ್ರಕರಣದ ಗಂಭೀರ ತನಿಖೆಗೆ ಪದೇ ಪದೇ ಒತ್ತಾಯಿಸುತ್ತಿದ್ದಾರೆ. ಈ ನಡುವೆ ಪೈಪ್ ಕಳ್ಳತನದ ವೇಳೆ ನಗರಸಭೆ ಸದಸ್ಯರೊಬ್ಬರು ಅಲ್ಲಿಯೇ ಇದ್ದು, ಅವರೇ ಮುತುವರ್ಜಿಯಿಂದ ಪೈಪನ್ನು ಲಾರಿಗೆ ತುಂಬಿದ ಬಗ್ಗೆ ಮಾಹಿತಿಯಿದೆ. `ಒಬ್ಬರಲ್ಲ ಮೂರು ಸದಸ್ಯರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ’ ಎನ್ನುವವರು ಇದ್ದಾರೆ. ಆದರೆ, ನೋಡಿದನ್ನು ಖಚಿತವಾಗಿ ಸಾಕ್ಷಿ ಹೇಳುವ ಧೈರ್ಯ ಯಾರಿಗೂ ಇಲ್ಲ.
ಇದೆಲ್ಲದರ ನಡುವೆ ಪೈಪ್ ಕಳ್ಳತನಲ್ಲಿ ಭಾಗಿಯಾದ ವ್ಯಕ್ತಿಯೊಬ್ಬರು `ನನ್ನನ್ನು ಕ್ಷಮಿಸಿ. ನೀವೇ ಕಾಪಾಡಿ’ ಎಂದು ಶಾಸಕ ಭೀಮಣ್ಣ ನಾಯ್ಕ ಅವರ ಕಾಲಿಗೆ ಬಿದ್ದಿದ್ದಾರೆ. ಆದರೆ, ಭೀಮಣ್ಣ ನಾಯ್ಕ ಮಾತ್ರ ಆ ವ್ಯಕ್ತಿಯನ್ನು ದೂರವಿಟ್ಟಿದ್ದಾರೆ. `ತಮಗಾಗಿ ನಾನು ದುಡಿದಿದ್ದೇನೆ. ಇನ್ನು ಮುಂದೆಯೂ ತಮಗೆ ಋಣಿಯಾಗಿರುವೆ’ ಎಂದು ಆ ವ್ಯಕ್ತಿ ಹೇಳಿದರೂ, ಭೀಮಣ್ಣ ನಾಯ್ಕ ಅದನ್ನು ಕಿವಿಗೆ ಹಾಕಿಕೊಂಡಿಲ್ಲ. `ತನಿಖೆಯ ದಿಕ್ಕು ತಪ್ಪಿಸಲು ಪೊಲೀಸರಿಗೆ ಪ್ರಭಾವಿಗಳ ಒತ್ತಡವಿದೆ’ ಎಂಬ ಗುಸು ಗುಸು ದಟ್ಟವಾಗಿದ್ದರೂ ಅದನ್ನು ಡಿವೈಎಸ್ಪಿ ಕೆ ಎಲ್ ಗಣೇಶ ಅಲ್ಲಗಳೆದಿದ್ದಾರೆ. `ನಮಗೆ ಯಾರ ಒತ್ತಡವೂ ಇಲ್ಲ. ಯಾವ ಒತ್ತಡಕ್ಕೂ ಮಣಿಯುವುದಿಲ್ಲ’ ಎಂದು ಡಿವೈಎಸ್ಪಿ ಕೆ ಎಲ್ ಗಣೇಶ ಹೇಳಿದ್ದಾರೆ. ಹೀಗಾಗಿ ಕಬ್ಬಿಣ್ಣ ಕದ್ದ ಕಳ್ಳ ಶಾಸಕರ ಕಾಲಿಗೆ ಬಿದ್ದರೂ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಬಹಿರಂಗವಾಗಿದೆ.