ದಕ್ಷಿಣ ಭಾರತದಲ್ಲಿನ ಪ್ರಸಿದ್ಧ ತಿನಿಸುವಗಳಲ್ಲಿ ದೋಸೆಗೆ ಮುಖ್ಯ ಸ್ಥಾನ. ಅದರಲ್ಲಿಯೂ ಉತ್ತರ ಕನ್ನಡ ಜಿಲ್ಲೆಯ ಹವ್ಯಕರ ಮನೆಗಳಲ್ಲಿ ನಸುಕಿನ ವೇಳೆಯಲ್ಲಿಯೇ ದೋಸೆಯ ಕಂಪು ಬಾರದಿದ್ದರೆ ಅನೇಕರಿಗೆ ಬೆಳಗಾಗುವುದೇ ಇಲ್ಲ!
ಅಕ್ಕಿ ಉದ್ದುವಿನ ಮಿಶ್ರಣದಿಂದ ಕೂಡಿದ ದೋಸೆ ಪೌಷ್ಠಿಕ ಆಹಾರ. ಮೆಂತೆ, ಕಡಲೆಬೇಳೆ, ಅವಲಕ್ಕಿ ಮಿಶ್ರಣ ಸೇರಿಸಿದ ಹಿಟ್ಟನ್ನು ಕಾದ ಕಾವಲಿ ಮೇಲೆ ಹಾಕುವ ವಿಧಾನ ಸಹ ಒಂದು ಕಲೆ. ತೆಳ್ಳವು, ಚಾಟಿ, ಎರೆಯವು ಸೇರಿ ನಾನಾ ಬಗೆಯ ದೋಸೆಗಳು ಉತ್ತರ ಕನ್ನಡದಲ್ಲಿ ಪ್ರಸಿದ್ಧ. ಚಟ್ನಿ, ಸಾಂಬಾರ್, ಕುರ್ಮಾ ಜೊತೆ ಮನೆಯಲ್ಲಿಯೇ ಲಭ್ಯವಿರುವ ಬೆಲ್ಲ-ತುಪ್ಪ, ಉಪ್ಪಿನಕಾಯಿ-ಎಣ್ಣೆಗೂ ಹೊಂದಿಕೊಳ್ಳಬಹುದಾದ ಏಕೈಕ ಗುಣಹೊಂದಿದ ಆಹಾರ ದೋಸೆ ಮಾತ್ರ. ಹೀಗಾಗಿ ದಿನದ ಮೂರು ಹೊತ್ತು ದೋಸೆ ಬಡಿಸಿದರೂ ಕಿಂಚಿತ್ತು ಬೇಸರಿಸಿಕೊಳ್ಳದೇ ಸವಿಯುವ ಮನಸ್ಸುಗಳು ಇಲ್ಲಿವೆ!
ಯಲ್ಲಾಪುರದಲ್ಲಿ ಮೊಟ್ಟ ಮೊದಲ ಬಾರಿಗೆ ಆಲೆಮನೆ ಹಬ್ಬ ಆಯೋಜಿಸಿ ಯಶಸ್ವಿಯಾದ ಮಾಗೋಡಿನ ಜನ ಇದೀಗ ದೋಸೆ ಹಬ್ಬದ ಪ್ರಯೋಗವನ್ನು ನಡೆಸಿ ಮೊದಲ ಹಂತದ ಯಶಸ್ಸು ಕಂಡರು. ದೋಸೆ ರುಚಿಯನ್ನು ಎಲ್ಲಡೆ ಪಸರಿಸುವ ಉದ್ದೇಶದಿಂದ ಗುರುವಾರ ಸಂಜೆ ದೋಸೆ ಹಬ್ಬ ಆಯೋಜಿಸಿದ್ದು, ನಿರೀಕ್ಷೆಗೂ ಮೀರಿ ದೋಸೆ ಅಭಿಮಾನಿಗಳು ಆಗಮಿಸಿದ್ದು ಇಲ್ಲಿನ ವಿಶೇಷ. ಮೂರು ಕಾವಲಿಗಳ ಮೂಲಕ ಮೂರು ಬಗೆಯ ದೋಸೆಗಳನ್ನು ನಿರಂತರ ಮೂರು ತಾಸುಗಳ ಕಾಲ ಊರಿನವರು ಎರೆದರು.
ಕಾಕಂಬಿ-ತುಪ್ಪ, ಚಟ್ನಿ, ಉಪ್ಪಿನಕಾಯಿ, ಚಟ್ನಿಪುಡಿ-ಎಣ್ಣೆಯ ಜೊತೆ ಆಗಮಿಸಿದವರು ದೋಸೆ ಸವಿದರು. ಆಗಮಿಸಿದ ಅತಿಥಿಗಳಿಗೆ ಅಲ್ಲಿದ್ದ ಸ್ವಯಂ ಸೇವಕರು ಅಚ್ಚುಕಟ್ಟಾಗಿ ದೋಸೆ ಬಡಿಸಿದರು. ಕಬ್ಬಿನ ಹಾಲಿನ ದೋಸೆ, ಈರುಳ್ಳಿ ದೋಸೆ ಹಾಗೂ ಉದ್ದಿನ ದೋಸೆಯ ಸವಿ ಸವಿದು ನಾಲಿಗೆ ಚಪ್ಪರಿಸಿದರು. ಮನೆಗಳಲ್ಲಿ ನಿತ್ಯ ಒಂದೊAದು ಬಗೆಯ ದೋಸೆ ಮಾಡಿದರೂ, ಇಲ್ಲಿ ಮೂರು ಬಗೆಯ ದೋಸೆಗಳು ಒಂದೇ ಕಡೆ ಸಿಕ್ಕಿರುವುದು ಸಂತಸ ಹೆಚ್ಚಿಸಿತು. ಅದರಲ್ಲಿಯೂ ಎಲ್ಲಿಯೂ ಮಾರಾಟಕ್ಕೆ ಸಿಗದ ಕಬ್ಬಿನ ಹಾಲಿನ ದೋಸೆಯನ್ನು ಮಾಗೋಡಿನಲ್ಲಿ ಉಚಿತವಾಗಿ ಉಣಬಡಿಸಲಾಯಿತು. ಅನೇಕರು ಕುಟುಂಬಸಹಿತವಾಗಿ ಆಗಮಿಸಿ ಹಬ್ಬವನ್ನು ಸಂಭ್ರಮಿಸಿದರು.
ಇಲ್ಲಿನ ನಾರಾಯಣ ಭಟ್ಟ ಮೊಟ್ಟೆಪಾಲ್ ಮುಂದಾಳತ್ವದಲ್ಲಿ ಮಾಗೋಡು ಕಾಲೋನಿಯ ವೀರ ಮಾರುತಿ ದೇವಾಲಯದಲ್ಲಿ ಈ ದೋಸೆ ಹಬ್ಬ ಆಯೋಜಿಸಲಾಗಿದ್ದು, ಹಬ್ಬದ ಎಲ್ಲಾ ಖರ್ಚು-ವೆಚ್ಚಗಳನ್ನು ಊರಿನವರೇ ಒಟ್ಟಾಗಿ ಭರಿಸಿದ್ದಾರೆ.