ಶಿರಸಿ-ಯಲ್ಲಾಪುರ ರಸ್ತೆ ಅಂಚಿನ ಕಾಗಾರಕೊಡ್ಲುವಿನಲ್ಲಿ ಮಾ 27ರಂದು ವೇದ, ಜ್ಯೋತಿಷ, ಆಯುರ್ವೇದ ವಿಷಯವಾಗಿ ಒಂದು ದಿನದ ವಿಚಾರಗೋಷ್ಠಿ ನಡೆಯಲಿದೆ. ಇಲ್ಲಿನ ಸುಮೇರು ಜ್ಯೋತಿರ್ವನದಲ್ಲಿ ಈ ದಿನ ಬೆಳಗ್ಗೆಯಿಂದ ಸಂಜೆಯವರೆಗೂ ಉಪನ್ಯಾಸ ಕಾರ್ಯಕ್ರಮ ಜರುಗಲಿದೆ.
ಕುಮಟಾದ ವೇದ ಸಂಸ್ಕೃತ ಅಕಾಡೆಮಿ, ಕಾಗಾರಕೊಡ್ಲುವಿನ ಸುಮೇರು ಜ್ಯೋತಿರ್ವಿಜ್ಞಾನ ಸಂಪ್ರತಿಷ್ಠಾನo ಆಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಆರ್ಥಿಕ ಸಹಕಾರದೊಂದಿಗೆ ವೇದ, ಜ್ಯೋತಿಷ, ಆಯುರ್ವೇದ ಕುರಿತಾದ ಜ್ಞಾನವೃದ್ಧಿಯ ಚರ್ಚೆ-ಸಂವಾದಗಳನ್ನು ಆಯೋಜಿಸಲಾಗಿದೆ.
ಈ ವೇಳೆ `ಗುರುನಮನಂ ಶಾಸ್ತ್ರ ಚಿಂತನo’ ಎಂಬ ಕಾರ್ಯಕ್ರಮವನ್ನು ಸಹ ಆಯೋಜಿಸಲಾಗಿದೆ. ಜ್ಯೋತಿಷಶಾಸ್ತ್ರ ಪ್ರಾಧ್ಯಾಪಕ ಕೆ ಸಿ ನಾಗೇಶ ಭಟ್ಟ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, `ಅಂದು ಬೆಳಗ್ಗೆ 9.30 ಕ್ಕೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಅಹಲ್ಯಾ ಶರ್ಮಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. 11 ಗಂಟೆಗೆ ಮೊದಲ ಗೋಷ್ಠಿ ವೇದ ಸಂಸ್ಕೃತ ಅಕಾಡೆಮಿ ಅಧ್ಯಕ್ಷ ರಮೇಶ ವರ್ಧನ ಅವರ ಅಧ್ಯಕ್ಷತೆಯಲ್ಲಿ ವೇದದ ಕುರಿತಾಗಿ ನಡೆಯಲಿದೆ. ಈಶ್ವರ ಭಟ್ಟ ಅವರ ಅಧ್ಯಕ್ಷತೆಯಲ್ಲಿ ಜ್ಯೋತಿಷ್ಯಶಾಸ್ತ್ರದ ಕುರಿತು ಎರಡನೇ ಗೋಷ್ಠಿ, ನಾಗರಾಜ ಭಟ್ಟ ಅವರ ಅಧ್ಯಕ್ಷತೆಯಲ್ಲಿ ಆಯುರ್ವೇದದ ಕುರಿತು ಮೂರನೇ ಗೋಷ್ಠಿ ನಡೆಯಲಿದೆ’ ಎಂದು ತಿಳಿಸಿದರು.
`ಮಧ್ಯಾಹ್ನ 3ಗಂಟೆಗೆ ಸಾಲಿಗ್ರಾಮದ ಜ್ಯೋತಿಷರತ್ನ ಎಸ್.ಶ್ರೀನಿವಾಸ ಅಡಿಗ ಅವರಿಗೆ ಶಿಷ್ಯ ಹಾಗೂ ಪ್ರಶಿಷ್ಯ ವೃಂದದಿAದ ಗೌರವಾರ್ಪಣೆ ಕಾರ್ಯಕ್ರಮವಿದೆ. 4ಗಂಟೆಗೆ ಗೋಷ್ಠಿಯ ಸಮಾರೋಪ ನಾರಾಯಣ ಆಚಾರ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ’ ಎಂದು ವಿವರಿಸಿದರು. ವೇದ ಸಂಸ್ಕೃತ ಅಕಾಡೆಮಿಯ ನಿರ್ದೇಶಕ ಗೋಪಾಲಕೃಷ್ಣ ಹೆಗಡೆ ಮಾತನಾಡಿ, `ಪಿಎಚ್‌ಡಿ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ಗೋಷ್ಠಿಯಲ್ಲಿ ವಿಷಯ ಮಂಡಿಸಲು ಅವಕಾಶ ನೀಡಲಾಗಿದೆ. ಇಲ್ಲಿನ ವಿಷಯಗಳು ಜರ್ನಲ್ ಆಫ್ ವೇದ ಸಂಸ್ಕೃತ ಅಕಾಡೆಮಿ ಎಂಬ ರಾಷ್ಟ್ರೀಯ ಸಂಶೋಧನಾ ಪತ್ರಿಕೆಯಲ್ಲಿ ಪ್ರಕಟವಾಗಲಿದೆ’ ಎಂದು ತಿಳಿಸಿದರು.
ಇದನ್ನು ಓದಿ: ಸುಮೇರು ಜ್ಯೋತಿರ್ವನನದ ವಿಶೇಷವೇನು? ಇಲ್ಲಿದೆ ಆಧ್ಯಾತ್ಮಿಕ ಪ್ರಶ್ನೆಗೆ ವೈಜ್ಞಾನಿಕ ಉತ್ತರ
ಸುಮೇರು ಜ್ಯೋತಿರ್ವಿಜ್ಞಾನ ಸಂಪ್ರತಿಷ್ಠಾನದ ಅಧ್ಯಕ್ಷೆ ನಿವೇದಿತಾ.ಎಂ, ವೇದ ಸಂಸ್ಕೃತ ಅಕಾಡೆಮಿ ಕಾರ್ಯದರ್ಶಿ ವಸಂತ ಅವಧಾನಿ ಇದ್ದರು.





