ಹೊಲ ಕಾಯಲು ತೆರಳಿದ್ದ ರೈತನ ಮೇಲೆ ಶನಿವಾರ ನಸುಕಿನಲ್ಲಿ ಕರಡಿ ದಾಳಿ ನಡೆಸಿದೆ. ಎರಡು ಕರಡಿ ಜೊತೆ ಕಾದಾಡಿ ಜೀವ ಉಳಿಸಿಕೊಂಡ ಡೋಮಿಂಗ್ ಸಿದ್ದಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ದಾಂಡೇಲಿಯ ಕೆಗದಾಳದಲ್ಲಿ ಡೋಮಿಂಗ್ ಸಿದ್ದಿ ಅವರು ಗೇರು ಮರಗಳನ್ನು ಬೆಳೆದಿದ್ದಾರೆ. ವಿಪರೀತ ವನ್ಯಜೀವಿ ಕಾಟದಿಂದಾಗಿ ಅವರು ಹಗಲು ರಾತ್ರಿ ಕಾವಲು ಕಾಯುತ್ತಾರೆ. ಶನಿವಾರ ಬೆಳಗ್ಗೆ ಗೋಡಂಬಿ ಬೆಳೆ ಹಾಳು ಮಾಡಲು ಆಗಮಿಸಿದ್ದ ಮಂಗನ ವಿರುದ್ಧ ಅವರು ಬೊಬ್ಬೆ ಹಾಕುತ್ತಿದ್ದರು. ನಸುಕಿನಲ್ಲಿ ಅವರು ಗೇರು ಬೆಳೆದ ಪ್ರದೇಶಕ್ಕೆ ಹೋಗಿದ್ದರು. ಆಗ, ಅಲ್ಲಿಯೇ ಅಡಗಿದ್ದ ಎರಡು ಕರಡಿಗಳು ಡೋಮಿಂಗ್ ಸಿದ್ದಿ ಅವರ ಮೇಲೆ ಆಕ್ರಮಣ ನಡೆಸಿದವು.
ಮೊದಲು ಒಂದು ಕರಡಿ ಡುಮಿಂಗ್ ಸಿದ್ದಿ ಅವರ ಮೇಲೆ ದಾಳಿ ನಡೆಸಿತು. ಆ ಕರಡಿಯಿಂದ ತಪ್ಪಿಸಿಕೊಂಡ ಡುಮಿಂಗ್ ಸಿದ್ದಿ ಪ್ರತಿ ದಾಳಿ ನಡೆಸಿದರು. ಇದರಿಂದ ರೊಚ್ಚಿಗೆದ್ದು ಇನ್ನೊಂದು ಕರಡಿ ದಾಳಿ ಮಾಡಿತು. ಆಗ ಡುಮ್ಮಿಂಗ್ ಸಿದ್ದಿ ಗಾಯಗೊಂಡರು. ಬಲಭಾಗದ ಕೈ ಹಾಗೂ ಎಡಭಾಗದ ಕಾಲಿಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಗಿದೆ.
ಆ ಎರಡು ಕರಡಿಗಳ ಜೊತೆ ಗುದ್ದಾಟ ನಡೆಸಿ ಜೀವ ಉಳಿಸಿಕೊಂಡ ಡುಮಿಂಗ್ ಸಿದ್ದಿ ಬೊಬ್ಬೆ ಹೊಡೆಯುತ್ತಲೇ ಮನೆ ಕಡೆ ಬಂದಿದ್ದು, ಇದನ್ನು ನೋಡಿದ ಅವರ ಸಹೋದರ ಅಗಸ್ಟಿನ್ ಸಿದ್ದಿ ಅವರನ್ನು ಆಸ್ಪತ್ರೆಗೆ ಕರೆತಂದರು. ದಾಂಡೇಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಕುಳಗಿ ವಲಯ ಅರಣ್ಯಾಧಿಕಾರಿ ಸಾಗರ್ ಬೋಗುರು ಕರಡಿ ದಾಳಿ ನಡೆಸಿದ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ.