ಕೃಷ್ಣಗದ್ದೆ ವಿಘ್ನೇಶ್ವರ ಭಟ್ಟರ ಅಡಿಕೆ ಕದ್ದ ಕಳ್ಳರನ್ನು ಪೊಲೀಸರು ಹಿಡಿದಿದ್ದಾರೆ. ಕಳ್ಳತನವಾದ ಎಲ್ಲಾ ಅಡಿಕೆ ಜೊತೆ ಅಡಿಕೆ ಸಾಗಿಸಿದ್ದ ಕಾರನ್ನು ವಶಕ್ಕೆಪಡೆದಿದ್ದಾರೆ.
ಯಲ್ಲಾಪುರ ತಾಲೂಕಿನ ಹಳಿಯಾಳ ಕ್ರಾಸಿನ ಕೃಷ್ಣಗದ್ದೆಯಲ್ಲಿ ವಿಘ್ನೇಶ್ವರ ತಿಮ್ಮಪ್ಪ ಭಟ್ಟ ಅವರು ಅಡಿಕೆ ಬೆಳೆದಿದ್ದರು. ಹಸಿ ಅಡಿಕೆ ಸಂಸ್ಕರಿಸಿದ್ದ ಅವರು ಅದನ್ನು ಮನೆ ಅಂಗಳದಲ್ಲಿ ಒಣಗಿಸಿದ್ದರು. ಜನವರಿ 14ರ ರಾತ್ರಿ 10 ಗಂಟೆಯವರೆಗೂ ಅಡಿಕೆ ಮನೆ ಅಂಗಳದಲ್ಲಿ ಸುರಕ್ಷಿತವಾಗಿರುವುದನ್ನು ಅವರು ಗಮನಿಸಿದ್ದರು. ಸಂಜೆ ಹೊದಸಿದ ಕಪ್ಪು ಬಣ್ಣದ ತಾಡಪತ್ರೆ ಸಹ ಸರಿಯಾಗಿರುವುದನ್ನು ನೋಡಿದ್ದರು. ಹೀಗಾಗಿ ಆ ದಿನ ಅವರು ನೆಮ್ಮದಿಯ ನಿದ್ದೆ ಮಾಡಿದ್ದರು.
ಆದರೆ, ಮರುದಿನ ಬೆಳಗ್ಗೆ ಎದ್ದು ನೋಡಿದಾಗ ಅಂಗಳದಲ್ಲಿ ಅಡಿಕೆ ಇರಲಿಲ್ಲ. ನಸುಕಿನ 3.30ರೊಳಗೆ ಆಗಮಿಸಿದ ಕಳ್ಳರು ಅಲ್ಲಿದ್ದ ಎಲ್ಲಾ ಅಡಿಕೆ ಅಪಹರಿಸಿ ಪರಾರಿಯಾಗಿದ್ದರು. ಅಂದಾಜು 50 ಸಾವಿರ ರೂ ಮೌಲ್ಯದ 1.30 ಕ್ವಿಂಟಲ್ ಕೆಂಪು ಅಡಿಕೆ ಕಾಣೆಯಾದ ಬಗ್ಗೆ ಅವರು ಮೊದಲು ಬೀಟ್ ಪೊಲೀಸರಲ್ಲಿ ಹೇಳಿಕೊಂಡರು. ಬೀಟ್ ಪೊಲೀಸರ ಸೂಚನೆ ಮೇರೆಗೆ ಯಲ್ಲಾಪುರ ಪೊಲೀಸ್ ಠಾಣೆಗೆ ತೆರಳಿ ಪ್ರಕರಣವನ್ನು ದಾಖಲಿಸಿದರು.
ಅಡಿಕೆ ಕಳ್ಳತನ ನಡೆದಿರುವ ಬಗ್ಗೆ ಪೊಲೀಸ್ ನಿರೀಕ್ಷಕ ರಮೇಶ ಹಾನಾಪುರ ಅವರು ಪೊಲೀಸ್ ಅಧೀಕ್ಷಕ ಎಂ ನಾರಾಯಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ಜಗದೀಶ ಎಂ ಎನ್ ಹಾಗೂ ಶಿರಸಿ ಪೊಲೀಸ್ ಉಪಾಧ್ಯಕ್ಷ ಗಣೇಶ ಕೆ ಎಲ್ ಅವರಿಗೆ ವರದಿ ಒಪ್ಪಿಸಿದರು. ಅದಾದ ನಂತರ ವಿವಿಧ ಆಯಾಮಗಳಲ್ಲಿ ತನಿಖೆ ಶುರು ಮಾಡಿದರು. ಈ ವೇಳೆ ಪಿಎಸ್‌ಐ ಸಿದ್ದಪ್ಪ ಗುಡಿ ಹಾಗೂ ಮಾಹಾವೀರ ಕಾಂಬ್ಳೆ ಅವರಿಗೆ ಅಡಿಕೆ ಕಳ್ಳರ ಬಗ್ಗೆ ಖಚಿತ ಮಾಹಿತಿಯೊಂದು ಸಿಕ್ಕಿತು.
ಅಡಿಕೆ ಸಾಗಿಸಿದ ಶಿಪ್ಟ್ ಕಾರಿನ ಹಿಂದೆ ಬಿದ್ದ ಪೊಲೀಸ್ ಸಿಬ್ಬಂದಿ ಮಹಮದ್ ಶಫಿ, ಗಿರೀಶ ಲಮಾಣಿ, ಪ್ರವೀಣ ಪೂಜಾರ, ಕರ್ಣಕುಮಾರ ಅಡಿಕೆ ಕದ್ದ ಮೂವರು ಕಳ್ಳರನ್ನು ಹುಡುಕಿದರು. ಪೊಲೀಸ್ ಸಿಬ್ಬಂದಿ ಶೇಷು ಮರಾಠಿ, ನಾಗರಾಜ ನಾಯ್ಕ, ಶೋಭಾ ನಾಯ್ಕ ಹಾಗೂ ರೇಖಾ ಅವರ ನೆರವಿನಿಂದ ದಾಂಡೇಲಿ ಸುನ್ನಿ ಮಸೀದಿ ಬಳಿಯ ಪಟೇಲನಗರದ ಮೌಲಾಲಿ ಸತ್ತರಸಾಬ್ ಜಮಾದಾರ್, ಹಾವೇರಿ ಸವಣೂರಿನ ಸಾಹಿಲ್ ಜಬ್ಬರ್ ಜವಾರಿ, ಹುಬ್ಬಳ್ಳಿಯ ಸಮೀರ್ ಮೆಹಬೂಬಸಾಬ್ ಹವಾಲ್ದಾರ್ ಎಂಬಾತರನ್ನು ವಶಕ್ಕೆಪಡೆದರು. ವಿಚಾರಣೆ ನಡೆಸಿದಾಗ ಅವರ ಬಳಿ ಕದ್ದ ಅಡಿಕೆ ಜೊತೆ ಕೃತ್ಯಕ್ಕೆ ಬಳಸಿದ ಕಾರು ಸಹ ಕಾಣಿಸಿತು. ಅವೆಲ್ಲವನ್ನು ಪೊಲೀಸರು ವಶಕ್ಕೆಪಡೆದು, ಕಳ್ಳರನ್ನು ನ್ಯಾಯಾಲಯಕ್ಕೆ ಒಪ್ಪಿಸಿದರು.







