ಶಿರಸಿಯ ಉಂಚಳ್ಳಿ ಸೊಸೈಟಿಯಲ್ಲಿ ಅವ್ಯವಹಾರ ನಡೆದ ಬಗ್ಗೆ ಕೆಲವರು ದೂರಿ, ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ. ಆದರೆ, `ಸೊಸೈಟಿ ಸುಭದ್ರವಾಗಿದ್ದು, ವದಂತಿಗಳನ್ನು ನಂಬಬೇಡಿ’ ಎಂದು ಶಿರಸಿಯ ಉಂಚಳ್ಳಿ ಸಹಕಾರಿ ಸಂಘದ ಆಡಳಿತ ಮಂಡಳಿ ಸ್ಪಷ್ಠಪಡಿಸಿದೆ.
1969ರ ಆಸುಪಾಸಿನಲ್ಲಿ ಉಂಚಳ್ಳಿ ಸಹಕಾರಿ ಸಂಘ ಸ್ಥಾಪನೆಯಾಯಿತು. ಕುಮಟಾ ಹೆಗಡೆಯ ಮೋಹನ ಹೆಗಡೆ ಸೊಸೈಟಿ ಸ್ಥಾಪನೆಯ ರೂವಾರಿ. ಸೈಕಲ್ ಅಂಗಡಿ, ಹಾಲು ವ್ಯಾಪಾರ ಮಾಡಿಕೊಂಡಿದ್ದ ಮೋಹನ ಹೆಗಡೆ ಅವರು ಕಳೆದ ಐದು ದಶಕಗಳಿಂದ ಸೊಸೈಟಿ ಮೂಲಕ ಸದಸ್ಯರ ಆರ್ಥಿಕ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಕಳೆದ ಒಂದು ವರ್ಷದಿಂದ ಸೊಸೈಟಿ ವಿರುದ್ಧ ಕೆಲ ಆರೋಪಗಳು ಕೇಳಿ ಬಂದಿದು, ಎಆರ್‌ಸಿಎಸ್ ನ್ಯಾಯಾಲಯದಲ್ಲಿ 30ಕ್ಕೂ ಅಧಿಕ ದೂರು ದಾಖಲಾಗಿದೆ. ಆದರೆ, ಅವೆಲ್ಲವೂ ವಜಾ ಆಗಿದೆ!
ಇನ್ನೂ `ಸಹಕಾರಿ ಸಂಘದಲ್ಲಿ ಕೋಟ್ಯಂತರ ರೂ ಅವ್ಯವಹಾರ ನಡೆದಿದೆ’ ಎಂದು ರವಿತೇಜ ಕೃಷ್ಣ ರೆಡ್ಡಿ ಅವರು ಸೊಸೈಟಿ ಅಧ್ಯಕ್ಷ ಮೋಹನ ಹೆಗಡೆ ಹಾಗೂ ನಿರ್ದೇಶಕ, ಸಾಲಗಾರ ಸದಸ್ಯರನ್ನು ಸೇರಿ 16 ಜನರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ. ಆರೋಪ ಮಾಡಿರುವ ರವಿತೇಜ ಕೃಷ್ಣ ರೆಡ್ಡಿ ಅವರು ಸಂಘದ ಅ ವರ್ಗದ ಸದಸ್ಯರು ಅಲ್ಲ. ಕಳೆದ 8-10 ವರ್ಷಗಳಿಂದ ಅವರು ಸಂಘದಲ್ಲಿ ವ್ಯವಹಾರವನ್ನು ಮಾಡಿಲ್ಲ’ ಎಂದು ಸೊಸೈಟಿ ಹೇಳಿದೆ. `ಅದಾಗಿಯೂ ಕೆಲವರು ಸೊಸೈಟಿ ಸದಸ್ಯರ ಮನೆ ಮನೆಗೆ ತೆರಳಿ ಠೇವಣಿ ಹಣ ಹಿಂಪಡೆಯುವAತೆ ಒತ್ತಡ ಹಾಕಿದ್ದಾರೆ. ಸುಳ್ಳು ಸುದ್ದಿ ನಂಬಿದ ಜನ ಸೊಸೈಟಿಯಲ್ಲಿರಿಸಿದ್ದ ಠೇವಣಿ ಹಿಂಪಡೆದ ಕಾರಣ ಕೋಟ್ಯಂತರ ರೂ ನಷ್ಠವಾಗಿದೆ. ಆದರೂ ಉಂಚಳ್ಳಿ ಸೇವಾ ಸಹಕಾರಿ ಸಂಘ ಸುಭದ್ರವಾಗಿದೆ’ ಎಂದು ಆಡಳಿತ ಮಂಡಳಿ ಹೇಳಿಕೊಂಡಿದೆ.
`ಸೊಸೈಟಿಯ ಸದಸ್ಯತ್ವ ರದ್ದಾಗಿರುವ ಅಣ್ಣಪ್ಪ ಎಚ್ ಕರಿಯಪ್ಪ ಎಂಬಾತರ ಕುಮ್ಮಕ್ಕಿನಿಂದ ರವಿತೇಜ ಕೃಷ್ಣರೆಡ್ಡಿ ಅವರು ಈ ಆರೋಪ ಮಾಡಿದ್ದಾರೆ. ಕಳೆದ ಒಂದು ವರ್ಷದಿಂದ ಸೊಸೈಟಿ ವಿರುದ್ಧ ಅನಗತ್ಯ ಅಪಪ್ರಚಾರ ನಡೆಯುತ್ತಿದ್ದು, ದುರುದ್ದೇಶದಿಂದ ಎಆರ್‌ಸಿಎಸ್ ನ್ಯಾಯಾಲಯದಲ್ಲಿ 30ಕ್ಕೂ ಅಧಿಕ ದೂರು ದಾಖಲಾಗಿದ್ದು, ಅವೆಲ್ಲವೂ ವಜಾ ಆಗಿದೆ’ ಎಂಬ ವಿಷಯದ ಬಗ್ಗೆ ಸೊಸೈಟಿ ಬೆಳಕು ಚೆಲ್ಲಿದೆ. `ಎಲ್ಲಾ ಸೊಸೈಟಿಗಳು ಸದಸ್ಯರ ಆರ್ಥಿಕ ಪರಿಸ್ಥಿತಿ ಹಾಗೂ ಅಗತ್ಯತೆಗೆ ಅನುಗುಣವಾಗಿ ಸಾಲ ಸೌಲಭ್ಯ ನೀಡುತ್ತದೆ. ಉಂಚಳ್ಳಿ ಸೊಸೈಟಿ ಸಹ ಸಾಕಷ್ಟು ಭದ್ರತೆಪಡೆದು ಸಾಲ ನೀಡಿದ್ದು, ಕೆಲವರಿಗೆ ಸಕಾಲದಲ್ಲಿ ಸಾಲ ಮರುಪಾವತಿ ಸಾಧ್ಯವಾಗಿಲ್ಲ. ಆ ಸಾಲ ವಸೂಲಾತಿ ಪ್ರಯತ್ನ ಮುಂದುವರೆದಿದ್ದು, ಯಾವ ಸದಸ್ಯರಿಗೂ ಆತಂಕ ಬೇಡ’ ಎಂದು ಸೊಸೈಟಿ ಅಭಯ ನೀಡಿದೆ.