ಶಾಲೆಗೆ ರಜೆಯಿದ್ದರೂ ಪಕ್ಷಿಗಳಿಗೆ ನೀರುಣಿಸುವದಕ್ಕಾಗಿಯೇ ಗೋಕರ್ಣದ ಸಾಣಿಕಟ್ಟಾದ ವಿದ್ಯಾರ್ಥಿಗಳು ನಿತ್ಯವೂ ಶಾಲೆಗೆ ಬರುತ್ತಿದ್ದಾರೆ. ಇಲ್ಲಿನ ಶ್ರೀ ಸದ್ಗುರು ನಿತ್ಯಾನಂದ ಪ್ರೌಢಶಾಲೆಯ ಮಕ್ಕಳು ಪಕ್ಷಿಗಳಿಗೆ ನೀರು-ಆಹಾರವಿರಿಸಿ ಅವುಗಳ ಚಲನ-ವಲನ ಅಭ್ಯಯಿಸುತ್ತಿದ್ದಾರೆ.
ಸದ್ಗುರು ನಿತ್ಯಾನಂದ ಪ್ರೌಢಶಾಲೆಯೂ ದಟ್ಟವಾದ ಅರಣ್ಯ ಪ್ರದೇಶದ ಬೆಟ್ಟದಲ್ಲಿದೆ. ವಿವಿಧ ಬಗೆಯ ಪಕ್ಷಿಗಳು ಶಾಲಾ ಆವರಣಕ್ಕೆ ಬರುವುದು ಸಾಮಾನ್ಯ. ಆಯಾಸಗೊಂಡ ಪಕ್ಷಿಗಳು ಶಾಲೆ ಸುತ್ತಲಿನ ಪ್ರದೇಶದಲ್ಲಿ ಕೆಲ ಕಾಲ ಕುಳಿತು ಮುಂದೆ ಸಾಗುತ್ತವೆ. ನೀರು-ಆಹಾರ ಸಿಗದೇ ನೆಲಕ್ಕೆ ಬಿದ್ದ ಪಕ್ಷಿಗಳನ್ನು ನೋಡಿದ ಇಲ್ಲಿನ ಮಕ್ಕಳು ಸ್ವಯಂ ಪ್ರೇರಣೆಯಿಂದ ಅವುಗಳ ದಾಹ ತೀರಿಸುವ ಕೆಲಸ ಮಾಡುತ್ತಿದ್ದಾರೆ.
ಶಾಲಾ ಅಂಗಳದಲ್ಲಿ ಪಕ್ಷಿಗಳಿಗೆ ನೆರಳು ಒದಗಿಸಲಾಗಿದೆ. ಜೊತೆಗೆ ಅವುಗಳಿಗೆ ನೀರು ಕುಡಿಯಲು ಅನುಕೂಲವಾಗುವ ನಿಟ್ಟಿನಲ್ಲಿ ಪ್ರತ್ಯೇಕ ಪಾತ್ರೆಗಳನ್ನು ಜೋಡಿಸಲಾಗಿದೆ. ಶಾಲಾ ದಿನಗಳಲ್ಲಿ ಇಲ್ಲಿನ ಮಕ್ಕಳು ಪಾಳಿ ಪ್ರಕಾರ ಹಕ್ಕಿಗಳಿಗೆ ನೀರು-ಆಹಾರವನ್ನಿರಿಸುತ್ತಾರೆ. ಸದ್ಯ ಶಾಲೆಗೆ ರಜೆಯಿದ್ದರೂ ಒಂದಷ್ಟು ಮಕ್ಕಳು ಹಕ್ಕಿಗಳಿಗೆ ನೀರಿಡುವ ಪದ್ಧತಿ ಬಿಡಬಾರದು ಎಂಬ ಕಾರಣಕ್ಕೆ ಶಾಲೆಗೆ ಬರುತ್ತಿದ್ದಾರೆ.
ವಿಜ್ಞಾನ ಶಿಕ್ಷಕ ಶ್ರೀನಿವಾಸ ನಾಯಕ ಅವರು ಹಕ್ಕಿಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಹಕ್ಕಿಗಳ ಜೀವನಶೈಲಿ ಹಾಗೂ ಚಟುವಟಿಕೆಗಳ ಬಗ್ಗೆ ಅವರು ಮಕ್ಕಳಲ್ಲಿ ಆಸಕ್ತಿ ಮೂಡಿಸಿದ್ದಾರೆ. ಹೀಗಾಗಿ ಸದ್ಗುರು ನಿತ್ಯಾನಂದ ಪ್ರೌಢಶಾಲೆಯ ಮಕ್ಕಳು ಹಕ್ಕಿಗಳ ಬಗ್ಗೆ ಅಪಾರ ಪ್ರೀತಿ ಹೊಂದಿದ್ದಾರೆ. ಶಾಲಾ ಆವರಣಕ್ಕೆ ಬರುವ ಬಣ್ಣ ಬಣ್ಣದ ಹಕ್ಕಿಗಳನ್ನು ಗುರುತಿಸುವುದು ಹಾಗೂ ಹೊಸ ಪ್ರಬೇದಗಳ ಬಗ್ಗೆ ದಾಖಲಿಸುವ ರೂಡಿಯನ್ನು ಅಲ್ಲಿನವರು ಬೆಳಸಿಕೊಂಡಿದ್ದಾರೆ.