ಸಾರ್ವಜನಿಕ ಸಹಭಾಗಿತ್ವದಲ್ಲಿ ಸರ್ಕಾರಿ ಕಾರ್ಯಕ್ರಮ ನಡೆಯಬೇಕು ಎಂಬುದು ಎಲ್ಲರ ಉದ್ದೇಶ. ಆದರೆ, ಮೊನ್ನೆ ಯಲ್ಲಾಪುರದ ಮಾಗೋಡಿನಲ್ಲಿ ಅರಣ್ಯ ಇಲಾಖೆ ಆಯೋಜಿಸಿದ್ದ ವಿಭಾಗ ಮಟ್ಟದ `ವಿಶ್ವ ಕಪ್ಪೆ ದಿನ’ ಕಾರ್ಯಕ್ರಮದಲ್ಲಿ ಹಿರಿಯ ಅಧಿಕಾರಿಗಳು-ಅರಣ್ಯ ಸಿಬ್ಬಂದಿ ಸೇರಿ 52 ಜನ ಮಾತ್ರ ಭಾಗವಹಿಸಿದ್ದರು!
ವಿವಿಧ ಚಟುವಟಿಕೆ ಹಾಗೂ ಕಾರ್ಯಕ್ರಮಗಳ ಮೂಲಕ ಜನರ ವಿಶ್ವಾಸಗಳಿಸುವುದು ಸರ್ಕಾರದ ಜವಾಬ್ದಾರಿ. ಅದರಲ್ಲಿಯೂ ಅರಣ್ಯ ಅತಿಕ್ರಮಣ, ವನ್ಯಜೀವಿ ಹಾವಳಿ ಹೆಚ್ಚಿರುವ ಈ ಭಾಗದಲ್ಲಿ ಜನರ ಜೊತೆ ನಿಕಟ ಸಂಪರ್ಕದಲ್ಲಿರುವುದು ಅರಣ್ಯ ಇಲಾಖೆಯ ಹೊಣೆ. ಆದರೆ, ಅಪರೂಪಕ್ಕೆ ಒಮ್ಮೆ ಒಳ್ಳೆಯ ಕಾರ್ಯಕ್ರಮ ಆಯೋಜಿಸುವ ಅರಣ್ಯ ಇಲಾಖೆ ಮಹತ್ವದ ಕಾರ್ಯಕ್ರಮಗಳಿಗೆ ಮಾಧ್ಯಮದವರನ್ನು ಕರೆದಿಲ್ಲ. ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕರನ್ನು ಆಮಂತ್ರಿಸಿ ಅರಿವು ಮೂಡಿಸುವ ಕೆಲಸ ಮಾಡಿಲ್ಲ.
ಪರಿಸರಕ್ಕೆ ಪೂರಕ ಕಪ್ಪೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ ಅರಣ್ಯ ಇಲಾಖೆ ಕಪ್ಪೆ ದಿನ ಕಾರ್ಯಾಗಾರ ಆಯೋಜಿಸಿತ್ತು. ಆದರೆ, ಕಾರ್ಯಕ್ರಮದ ಬಗ್ಗೆ ಪ್ರಚಾರ ನೀಡುವಲ್ಲಿ ಇಲಾಖೆ ವಿಫಲವಾಯಿತು. `ನಾವು ಕಾರ್ಯಕ್ರಮ ಮಾಡಿದ್ದೇವೆ’ ಎಂದು ದಾಖಲೆಗಳಲ್ಲಿ ತೋರಿಸಿಕೊಳ್ಳುವುದಕ್ಕಾಗಿ ಮಾತ್ರ ಕೆಲವೇ ಕೆಲವು ವಿದ್ಯಾರ್ಥಿಗಳನ್ನು ಕರೆಯಿಸಿ ಕಾರ್ಯಕ್ರಮ ಮಾಡಿತು.
ಸಭೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗಿಂತಲೂ ಅರಣ್ಯ ಇಲಾಖೆ ಅಧಿಕಾರಿ-ಸಿಬ್ಬಂದಿಯೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅದರಲ್ಲಿಯೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ಆಮಂತ್ರಿಸಿ, ಸಬಿಕರನ್ನು ಹಿಡಿದಿಟ್ಟುಕೊಳ್ಳಲಾಯಿತು. ಲಭ್ಯವಿರುವ ಫೋಟೋ-ದಾಖಲೆಗಳ ಪ್ರಕಾರ ಅರಣ್ಯ ಇಲಾಖೆ ಅಧಿಕಾರಿ-ಸಿಬ್ಬಂದಿ ಸೇರಿ 52ಕ್ಕಿಂತ ಹೆಚ್ಚಿನ ಜನ ಈ ಕಾರ್ಯಕ್ರಮದಲ್ಲಿ ಕಾಣಿಸಲಿಲ್ಲ. ಎರಡು ಅರಣ್ಯ ವಲಯದವರು ಒಟ್ಟಾಗಿ ಒಂದು ಕಾರ್ಯಕ್ರಮ ಸಂಘಟಿಸಿದ್ದರು. ಆದರೂ, ಸಾರ್ವಜನಿಕ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಮಾಡಲು ಅವರು ವಿಫಲರಾದರು.
ಕೆನರಾ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿಗಳಾದ ವಸಂತ ರೆಡ್ಡಿ ಕೆ ವಿ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಯಲ್ಲಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಹರ್ಷ ಬಾನು ಜಿ ಪಿ, ಕಾರವಾರ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮಂಜುನಾಥ ನಾವಿ, ಯಲ್ಲಾಪುರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮಾವತಿ ಭಟ್, ಮಂಚಿಕೇರಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸಂಗಮೇಶ್ವರ ಪ್ರಭಾಕರ, ಮುಂಡಗೋಡು ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ರವಿ ಹುಲಕೋಟಿ, ಕಿರವತ್ತಿಯ ಮರ ಮುಟ್ಟುಸಂಗ್ರಹಾಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ವೀರೇಶ್ ಕಬ್ಬಿನ್, ಮುಂಡಗೋಡ್ ಮರಮುಟ್ಟು ಸಂಗ್ರಹಾಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಅಮಿತ್ ಕುಮಾರ್ ಚೌಹಾಣ ಸೇರಿ ಹಲವು ಅಧಿಕಾರಿಕಾರಿಗಳಿಗೆ ಸೀಮಿತವಾದ ಕಾರ್ಯಕ್ರಮ ಇದಾಗಿತ್ತು.