ಹೈನುಗಾರಿಕೆಯನ್ನು ಉಪಕಸುಬನ್ನಾಗಿಸಿಕೊಂಡ ಉತ್ತರ ಕನ್ನಡ ಜಿಲ್ಲೆಗೂ ರಾಜಾರೋಷವಾಗಿ ನಕಲಿ ತುಪ್ಪ ಬರುತ್ತಿದೆ. ಬಳ್ಳಾರಿಯಲ್ಲಿ ತಯಾರಾಗುವ ನಕಲಿ ತುಪ್ಪ ಜಿಲ್ಲೆಯ ಜನರ ಆರೋಗ್ಯ ಹಾಳು ಮಾಡುತ್ತಿದೆ.
ನಕಲಿ ಆಹಾರ ಪದಾರ್ಥ ಮಾರಾಟಗಾರರಿಗೆ 1 ಲಕ್ಷ ರೂ ದಂಡವಿದ್ದರೂ ಅದನ್ನು ಲೆಕ್ಕಿಸದೇ ಕೆಲವರು ಕಲಬೆರೆಕೆ ಆಹಾರವನ್ನು ಮಾರಾಟ ಮಾಡುತ್ತಿದ್ದಾರೆ. ಕುಮಟಾ, ಶಿರಸಿ ಹಾಗೂ ಯಲ್ಲಾಪುರ ಭಾಗದಲ್ಲಿ ನಕಲಿ ತುಪ್ಪ ಮಾರಾಟಗಾರರ ಹಾವಳಿ ಹೆಚ್ಚಾಗಿದೆ. ಕೆಲ ದಿನಗಳ ಹಿಂದೆ ಕುಮಟಾದಲ್ಲಿ ನಕಲಿ ಉಪ್ಪ ಮಾರಾಟಗಾರನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆಹಾರ ಸುರಕ್ಷತಾ ಅಧಿಕಾರಿ ಅರುಣ ಕಾಶಿ ಭಟ್ಟ ಅವರು ಆ ತುಪ್ಪದ ಮಾದರಿಯನ್ನುಪಡೆದು ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಆ ವೇಳೆ ತುಪ್ಪ ನಕಲಿ ಎಂದು ಅರಿವಾಗಿದ್ದು, ಸೋಮವಾರ ಶಿರಸಿಯಲ್ಲಿ ನಕಲಿ ತುಪ್ಪ ಮಾರಾಟಗಾರರು ಸಿಕ್ಕಿಬಿದ್ದಿದ್ದಾರೆ.
ಸಿಹಿ ತಿಂಡಿ ತಯಾರಿಸುವುದಾಗಿ ನಂಬಿಸಿ ನಾಲ್ವರು ಶಿರಸಿಯ ಗಾಂಧೀನಗರದಲ್ಲಿರುವ ಗೊನ್ಸಾಲಿವಿಸ್ ಅವರ ಮನೆಯನ್ನು ಬಾಡಿಗೆಗೆಪಡೆದಿದ್ದರು. ಅಲ್ಲಿ ನಕಲಿ ತುಪ್ಪ ತಯಾರಿಸಿ ವಿವಿಧ ಕಡೆ ಸರಬರಾಜು ಮಾಡುತ್ತಿದ್ದರು. ಅದರಂತೆ ಶಿರಸಿಯ ಇಟಗುಳಿಯಲ್ಲಿ ನಕಲಿ ತುಪ್ಪ ಮಾರಾಟ ಮಾಡುತ್ತಿದ್ದಾಗ ಊರಿನವರು ಪ್ರಶ್ನಿಸಿದರು. ಅವರನ್ನು ಹಿಡಿದು ವಿಚಾರಿಸಿದಾಗ ತುಪ್ಪದ ಅಸಲಿತನ ಹೊರಬಿದ್ದಿದೆ. ಮಾರುಕಟ್ಟೆಯಲ್ಲಿ ಕನಿಷ್ಟ 600ರೂ ಬೆಲೆಯ ತುಪ್ಪವನ್ನು 300ರೂಪಾಯಿಗೆ ಮಾರಾಟ ಮಾಡುತ್ತಿದ್ದು, ತಕ್ಷಣ ಊರಿನವರು ನಕಲಿ ತುಪ್ಪ ಮಾರಾಟಗಾರರನ್ನು ಪೊಲೀಸರಿಗೆ ಒಪ್ಪಿಸಿದರು. ಸದ್ಯ ತುಪ್ಪದ ಮಾದರಿಯನ್ನು ಸಂಗ್ರಹಿಸಿ ಅದನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.
`ಕಾಯ್ದೆ ಪ್ರಕಾರ ಹಪ್ಪಳ, ಸಂಡಿಗೆ, ಜೇನುತುಪ್ಪ, ಬೆಲ್ಲದಿಂದ ಹಿಡಿದು ಯಾವುದೇ ಉತ್ಪನ್ನವನ್ನು ಅಧಿಕೃತ ಲೇಬಲ್ ಇಲ್ಲದೇ ಮಾರುವ ಹಾಗಿಲ್ಲ. ಉತ್ಪನ್ನ ತಯಾರಕರು ಆನ್‌ಲೈನ್ ಮೂಲಕ 100ರೂ ಪಾವತಿಸಿ ಅಧಿಕೃತ ಪ್ರಮಾಣ ಪತ್ರ ಪಡೆಯುವ ಅವಕಾಶವಿದೆ. ಕಲಬೆರೆಕೆ, ಗುಣಮಟ್ಟದಲ್ಲಿನ ದೋಷ, ಸುಳ್ಳು ಮಾಹಿತಿ ನೀಡಿ ಮಾರಾಟ ಮಾಡುವಿಕೆ ಕಾನೂನುಬಾಹಿರ. ಈ ಬಗೆಯ ಪ್ರಕರಣಗಳಿದ್ದರೆ ದಾಳಿ ನಡೆಸಿ, ಕಾನೂನು ಕ್ರಮ ಜರುಗಿಸಲಾಗುತ್ತದೆ’ ಎಂದು ಆಹಾರ ಸುರಕ್ಷತಾ ಅಧಿಕಾರಿ ಅರುಣ ಕಾಶಿ ಭಟ್ಟ ಕಾನೂನು ಅರಿವು ಮೂಡಿಸಿದ್ದಾರೆ.
ಇನ್ನೂ ಯಲ್ಲಾಪುರದ ರಸ್ತೆ ಅಂಚಿನಲ್ಲಿ ಸಹ ನಕಲಿ ತುಪ್ಪ ಮಾರಾಟವಾಗುತ್ತಿರುವ ಬಗ್ಗೆ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ದೂರು ಸಲ್ಲಿಕೆಯಾಗಿದೆ. ಯಲ್ಲಾಪುರದಲ್ಲಿಯೂ ಅಧಿಕಾರಿಗಳು ದಾಳಿ ನಡೆಸಿ ಬಿಸಿ ಮುಟ್ಟಿಸುವ ಸಾಧ್ಯತೆಗಳಿದೆ.
ನಕಲಿ ತುಪ್ಪ ತಯಾರಿಕಾ ಮಳಿಗೆ ಮೇಲೆ ನಡೆದ ದಾಳಿ ಹೇಗಿತ್ತು? ವಿಡಿಯೋ ಇಲ್ಲಿ ನೋಡಿ..