ದಾಂಡೇಲಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಅಜಯಸಿಂಗ್ ಸುಬೇದದಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪದೇ ಪದೇ ಬೆದರಿಕೆ ಒಡ್ಡುತ್ತಿದ್ದ ಅಜಯಸಿಂಗ್ ನೇಣು ಹಾಕಿಕೊಂಡು ಸಾವನಪ್ಪಿದ್ದಾರೆ.
ದಾಂಡೇಲಿಯ ಭಾಗ್ಯಮಂದಿರ ಟೌನ್‌ಶಿಫ್’ನಲ್ಲಿ 22 ವರ್ಷದ ಅಜಯಸಿಂಗ್ ಸುಬೇದದಾರ್ ವಾಸವಾಗಿದ್ದರು. ತಾಯಿ, ಅಣ್ಣ ಹಾಗೂ ತಂಗಿ ಜೊತೆ ಅವರು ಬದುಕುತ್ತಿದ್ದರು. ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ಸರಾಯಿ ಸೇವನೆಯ ಹವ್ಯಾಸ ಹೊಂದಿದ್ದರು. ವಿಪರೀತ ಸರಾಯಿ ಸೇವಿಸಿದ ಕಾರಣ ತಾಯಿ ಹಾಗೂ ತಂಗಿ ಸೇರಿ ಅಜಯಸಿಂಗ್’ಗೆ ಬೈದಿದ್ದರು.
`ಸರಾಯಿ ಸೇವನೆ ಬೇಡ’ ಎಂದು ಹೇಳಿದಾಗ `ಬುದ್ದಿ ಹೇಳಲು ಬಂದರೆ ಆತ್ಮಹತ್ಯೆ ಮಾಡಿಕೊಳ್ಳುವೆ’ ಎಂದು ಅಜಯಸಿಂಗ್ ಬೆದರಿಸುತ್ತಿದ್ದರು. ಇದೇ ವಿಷಯವಾಗಿ ಕುಟುಂಬದಲ್ಲಿ ಗಲಾಟೆ ನಡೆದಿದ್ದು, ತಾಯಿ ಹಾಗೂ ತಂಗಿ ಜೊತೆ ಅಜಯಸಿಂಗ್ ಜಗಳ ಮಾಡಿಕೊಂಡಿದ್ದರು. ಮಾರ್ಚ 22ರಂದು ಅಜಯ ಸಿಂಗ್ ಜಂತಿಗೆ ಸೀರೆ ಕಟ್ಟಿ ಅದಕ್ಕೆ ಕೊರಳು ಕೊಟ್ಟರು. ನೇತಾಡುತ್ತಿದ್ದ ಅವರನ್ನು ಇಳಿಸಿ ನೋಡಿದಾಗ ಸಾವನಪ್ಪಿದ್ದರು.