ದಾಂಡೇಲಿಯ ಹಾರ್ನೋಡಾ ಗ್ರಾಮದಲ್ಲಿ ದಾಸ್ತಾನು ಮಾಡಿದ್ದ ಹುಲ್ಲಿನ ಬವಣೆ ಬೆಂಕಿಗೆ ಆಹುತಿಯಾಗಿದೆ. ಲಕ್ಷಾಂತರ ರೂ ಮೌಲ್ಯದ ಹುಲ್ಲಿನ ಉಂಡೆಗಳು ಸುಟ್ಟು ಕರಕಲಾಗಿದೆ.
ಹಾರ್ನೋಡಾ ಗ್ರಾಮದ ಬಾಬು ಲಕ್ಕು ಪಟಕಾರೆ ಎಂಬಾತರು ಹುಲ್ಲಿನ ಬವಣೆ ನಿರ್ಮಿಸಿಕೊಂಡಿದ್ದರು. ಹೈನುಗಾರಿಕೆ ಮಾಡಿಕೊಂಡಿರುವ ಅವರು ದನಕರುಗಳ ಮೇವಿಗಾಗಿ ರಾಮನಗರದಿಂದ ಹುಲ್ಲು ತರಿಸಿದ್ದರು. ಆಕಸ್ಮಿಕ ಅಗ್ನಿ ಅವಘಡದಿಂದ ಆ ಹುಲ್ಲುಗಳು ಬೂದಿಯಾಗಿದೆ.
ಹುಲ್ಲಿಗೆ ಬೆಂಕಿ ಬಿದ್ದ ಸುದ್ದಿ ಕೇಳಿ ಅನೇಕರು ದೌಡಾಯಿಸಿದರು. ವಿವಿಧ ಪಾತ್ರೆ-ಕೊಡಗಳ ಮೂಲಕ ನೀರು ಹೊಯ್ದು ಬೆಂಕಿ ಆರಿಸುವ ಪ್ರಯತ್ನ ನಡೆಸಿದರು. ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಅಗ್ನಿಶಾಮಕ ವಾಹನ ಸಹ ಆಗಮಿಸಿ ಬೆಂಕಿ ಆರಿಸಿತು. ಅದಾಗಿಯೂ ಹುಲ್ಲು ಸುಟ್ಟು ಕರಕಲಾಯಿತು.
ಬೇಸಿಗೆ ಸಮೀಪಿಸಿದ್ದರಿಂದ ಜಾನುವಾರುಗಳಿಗೆ ನೀರಿನ ಕೊರತೆ ಉಂಟಾಗಿದ್ದು, ಹುಲ್ಲು ಸುಟ್ಟಿದ್ದರಿಂದ ಬಾಬು ಲಕ್ಕು ಪಟಕಾರೆ ಅವರ ಕೊಟ್ಟಿಗೆಯಲ್ಲಿನ ದನಗಳಿಗೆ ಮೇವು ಇಲ್ಲವಾಗಿದೆ. 1.5 ಲಕ್ಷ ರೂ ನಷ್ಟವಾಗಿರುವ ಬಗ್ಗೆ ಅಂದಾಜಿಸಲಾಗಿದೆ.