ಕಾರವಾರದ ಕಾಳಿ ನದಿ ಬಗೆದು ಅಕ್ರಮವಾಗಿ ರೇತಿ ತೆಗೆದ ದುರುಳರು ಸಾಗಾಟದ ಲಾರಿ ಪಂಚರ್ ಆದ ಪರಿಣಾಮ ಮರಳನ್ನು ರಸ್ತೆ ಮದ್ಯೆ ಚೆಲ್ಲಿ ಪರಾರಿಯಾಗಿದ್ದಾರೆ. ಇದರಿಂದ ಬಸ್ಸು ಸೇರಿ ಇತರೆ ವಾಹನ ಸವಾರರು ಸಮಸ್ಯೆ ಅನುಭವಿಸುತ್ತಿದ್ದಾರೆ!
ಕಾರವಾರದ ಕಿನ್ನರ ಬಳಿಯ ಸಿದ್ದರ ಐಟಿಐ ಕಾಲೇಜು ಸಮೀಪ ರಾಜಾರೋಷವಾಗಿ ಮರಳುಗಾರಿಕೆ ನಡೆಯುತ್ತಿದೆ. ಇಲ್ಲಿನ ಮರಳು ನಿಯಮಗಳನ್ನು ಉಲ್ಲಂಘಿಸಿ ನೆರೆ ರಾಜ್ಯ ಗೋವಾಗೆ ಸಹ ಸಾಗಾಟವಾಗುತ್ತಿದೆ. ಶುಕ್ರವಾರ ರಾತ್ರಿ 9 ಗಂಟೆ ವೇಳೆಗೆ ಕಿನ್ನರದಿಂದ ಕಾರವಾರ ಕಡೆ ಹೊರಟ ರೇತಿ ಹೊತ್ತ ಲಾರಿ ಪಂಚರ್ ಆಗಿದ್ದು, ಕಿರಿದಾದ ಕಡವಾಡ ಸೇತುವೆ ಮೇಲೆ ಮರಳು ಚೆಲ್ಲಿ ಲಾರಿ ಚಾಲಕ ನಾಪತ್ತೆಯಾಗಿದ್ದಾರೆ.
ನಂತರ ಲಾರಿ ಮಾಲಕ ಆಗಮಿಸಿ, ಆ ಲಾರಿ ತೆಗೆದುಕೊಂಡು ಹೋಗಿದ್ದು, ಮರಳು ಮಾತ್ರ ಅಲ್ಲಿಯೇ ಬಿದ್ದಿದೆ. ಸೇತುವೆ ಮೇಲೆ ಮರಳು ಬಿದ್ದಿರುವುದರಿಂದ ಈ ಮಾರ್ಗವಾಗಿ ಓಡಾಡುವ ವಾಹನ ಸವಾರರು ಸಮಸ್ಯೆ ಅನುಭವಿಸುತ್ತಿದ್ದಾರೆ. ಬಸ್ಸು ಸೇರಿ ಇನ್ನಿತರ ವಾಹನಗಳ ಓಡಾಟಕ್ಕೆ ಇಲ್ಲಿ ತೊಂದರೆಯಾಗಿದೆ. ರಾತ್ರಿ ರಸ್ತೆ ಅಂಚಿನಲ್ಲಿದ್ದ ಮರಳು ಹಂತ ಹಂತವಾಗಿ ರಸ್ತೆ ಮೇಲೆ ಬಂದು ಬೀಳುತ್ತಿದೆ. ವೇಗವಾಗಿ ಬರುವ ದ್ವಿಚಕ್ರ ವಾಹನದ ಚಕ್ರಗಳು ಏಕಾಏಕಿ ಮರಳಿನಲ್ಲಿ ಸಿಲುಕಿ ಸಮಸ್ಯೆ ಅನುಭವಿಸುತ್ತಿವೆ.
ಇನ್ನೂ ಈ ರಸ್ತೆ ಕೈಗಾ ಅಣು ವಿದ್ಯುತ್ ಘಟಕವನ್ನು ಸಂಪರ್ಕಿಸುವುದರಿAದ ಹಲವು ಸಲ ಭಾರೀ ಪ್ರಮಾಣದ ಯಂತ್ರೋಪಕರಣಗಳು ಈ ಮಾರ್ಗವಾಗಿ ಸಂಚರಿಸುತ್ತದೆ. ಇಕ್ಕಟ್ಟಾಗಿರುವ ಸೇತುವೆ ಮೇಲೆ ಮರಳು ಬಿದ್ದ ಅವಧಿಯಲ್ಲಿ ಭಾರೀ ಪ್ರಮಾಣದ ವಾಹನಗಳು ಬಂದರೆ ಸಂಚಾರ ದಟ್ಟಣೆ ಜೊತೆ ಇನ್ನಿತರ ಸಮಸ್ಯೆ ಸಾಮಾನ್ಯ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ, ಗ್ರಾಮ ಪಂಚಾಯತ, ಪೊಲೀಸ್ ಹಾಗೂ ಅರಣ್ಯ ಸೇರಿ ಹಲವು ಇಲಾಖೆಯವರಿಗೆ ಅಕ್ರಮ ಮರಳುಗಾರಿಕೆ ತಡೆಯುವ ಜವಾಬ್ದಾರಿಯಿದೆ. ಆದರೆ, ಲೋಕೋಪಯೋಗಿ ಇಲಾಖೆಯ ಆಸ್ತಿಯಾದ ರಸ್ತೆ ಹಾಗೂ ಸೇತುವೆ ಮೇಲೆ ಬಿದ್ದ ಮರಳಿನ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ.