ಗ್ಯಾಸ್ ಸಿಲೆಂಡರ್ ಸೋರಿಕೆಯಿಂದ ಮುಂಡಗೋಡಿನ ಸಕ್ರಿವ್ವಾ ಲಮಾಣಿ ಅವರ ಮನೆ ಸುಟ್ಟು ಕರಕಲಾಗಿದೆ. ಕ್ಷಣಮಾತ್ರದಲ್ಲಿ ಹೊತ್ತಿ ಉರಿದ ಬೆಂಕಿಯಿoದ ಮನೆಯ ದಾಖಲಾತಿ ಜೊತೆ ವಿವಿಧ ಪರಿಕ್ಕರಗಳು ಅಗ್ನಿಗೆ ಆಹುತಿಯಾಗಿದೆ.
ಮುಂಡಗೋಡಿನ ಅರಶಿನಗೇರಿಯಲ್ಲಿ ಸುಕ್ರವ್ವ ರವಿ ಲಮಾಣಿ ವಾಸವಾಗಿದ್ದರು. ಶುಕ್ರವಾರ ಅಡುಗೆ ಕೆಲಸ ಮುಗಿಸಿದ ಅವರು ಮನೆ ಹೊರಗೆ ಬಂದಿದ್ದರು. ಅಡುಗೆ ಅನಿಲ ಸೋರಿಕೆಯಾಗುತ್ತಿರುವುದು ಅವರ ಗಮನಕ್ಕೆ ಬರಲಿಲ್ಲ. ಮನೆ ಮಾಳಿಗೆ ಸುಟ್ಟ ಬಳಿಕ ಅಗ್ನಿ ಅವಘಡದ ಬಗ್ಗೆ ಅರಿವಾಗಿದ್ದು, ಅಕ್ಕ-ಪಕ್ಕದ ಜನ ಆಗಮಿಸಿ ಬೆಂಕಿ ಆರಿಸುವ ಪ್ರಯತ್ನ ನಡೆಸಿದರು. ಆದರೆ, ಪ್ರಯೋಜನವಾಗಲಿಲ್ಲ.
ಅಗ್ನಿ ಅವಘಡದ ವೇಳೆ ಮನೆ ಒಳಭಾಗದಲ್ಲಿ ಯಾರೂ ಇಲ್ಲದ ಕಾರಣ ಕುಟುಂಬದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ಆರಿಸುವ ಕೆಲಸ ಮಾಡಿದ್ದಾರೆ. ಮನೆ ಒಳಭಾಗ ಸುಟ್ಟಿದ್ದರೂ ಅಗ್ನಿಯ ಜ್ವಾಲೆ ಹರಡುವುದನ್ನು ಅಗ್ನಿಶಾಮಕ ಸಿಬ್ಬಂದಿ ತಡೆದರು. ಅಗ್ನಿಶಾಮಕ ಠಾಣಾಧಿಕಾರಿ ನಾಗರಾಜ ಮೂಲಿಮನಿ, ಸಿಬ್ಬಂದಿ ಮಲ್ಲಿಕಾರ್ಜುನ ಮಲ್ಲೀಗವಾಡ, ಅಡಿವೆಪ್ಪ ಕುರುವಿನಕೊಪ್ಪ, ವೆಂಕಟೇಶ ಪಟಿಗೆ, ಹರೀಶ್ ಪಟಗಾರ, ದುರಗಪ್ಪ ಹರಿಜನ, ರಾಹುಲ ಜಿಡ್ಡಿಮನಿ ನೀರು ಹಾಯಿಸಿ ಬೆಂಕಿ ಆರಿಸಿದರು.
ಈ ಬೆಂಕಿ ಅನಾಹುತದಿಂದ ಮನೆಯ ದಾಖಲಾತಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾದವು. ಅಡುಗೆ ಸಾಮಗ್ರಿ, ಪಾತ್ರೆ, ಅಕ್ಕಿ ಸೇರಿ ದಿನನಿತ್ಯದ ಬಳಕೆ ಸಾಮಗ್ರಿಗಳು ಉರುದು ಹೋದವು. ಮನೆಯಲ್ಲಿದ್ದ ಹಣ ಸಹ ಬೆಂಕಿಗೆ ಆಹುತಿಯಾಯಿತು. ಮನೆ ಕಳೆದುಕೊಂಡ ಮಹಿಳೆ ಕಣ್ಣೀರು ಹಾಕುತ್ತಿರುವುದು ಕಾಣಿಸಿತು.