ಕಳೆದ ಮಳೆಗಾಲದಲ್ಲಿ ಮುರಿದ ಮನೆಗೆ ಈವರೆಗೂ ಪರಿಹಾರ ನೀಡದ ಗ್ರಾಮ ಆಡಳಿತಾಧಿಕಾರಿಯನ್ನು ಹಳಿಯಾಳ ವಿಧಾನಸಭಾ ಕ್ಷೇತ್ರದ ಶಾಸಕ ಆರ್ ವಿ ದೇಶಪಾಂಡೆ ತರಾಠೆಗೆ ತೆಗೆದುಕೊಂಡಿದ್ದಾರೆ. ಬೇಜವಬ್ದಾರಿ ಉತ್ತರ ನೀಡಿದ ಗ್ರಾಮ ಆಡಳಿತಾಧಿಕಾರಿ ರೆಹಮಾನ್ ಅವರಿಗೆ ನೀರಿನ ಬಾಟಲಿಯಿಂದ ಹೊಡೆಯಲು ಪ್ರಯತ್ನಿಸಿದ್ದು, ಅಲ್ಲಿದ್ದ ಇತರರು ಅದನ್ನು ತಡೆದರು.
2024ರ ಮಳೆಗಾಲದಲ್ಲಿ ಜೋಯಿಡಾ ರಾಮನಗರದ ಶಾರಧಾ ರಮೇಶ ಸೋಲೇಕರ ಅವರ ಮನೆಗೆ ಅಪಾರ ಹಾನಿಯಾಗಿತ್ತು. ಸಾಕಷ್ಟು ಕಚೇರಿ ಅಲೆದಾಟ ನಡೆಸಿದರೂ ಅವರಿಗೆ ಪರಿಹಾರ ಸಿಕ್ಕಿರಲಿಲ್ಲ. ಹೀಗಾಗಿ ನೊಂದ ಮಹಿಳೆ ಶಾಸಕರ ಬಳಿ ಅಳಲು ತೋಡಿಕೊಂಡಿದ್ದರು. ಹೀಗಾಗಿ ಗುರುವಾರ 1 ತಾಸುಗಳ ಕಾಲ ಗ್ರಾಮ ಆಡಳಿತ ಅಧಿಕಾರಿ ಹಾಗೂ ಇನ್ನಿತರ ಕಂದಾಯ ಅಧಿಕಾರಿಗಳನ್ನು ಆರ್ ವಿ ದೇಶಪಾಂಡೆ ತರಾಠೆಗೆ ತೆಗೆದುಕೊಂಡರು.
`ಕoದಾಯ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇರುವುದಿಲ್ಲ. ಈ ಅಧಿಕಾರಿ ಸಹ ನಿತ್ಯ ಬೆಳಗಾವಿಯಿಂದ ಬರುತ್ತಿದ್ದು, ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ’ ಎಂದು ಆರ್ ವಿ ದೇಶಪಾಂಡೆ ಗುಡುಗಿದರು. `ನಮ್ಮ ಕೆಲಸ ನಾವು ಮಾಡಿದ್ದೇವೆ. ಪರಿಹಾರ ತಲುಪಿಸುವುದು ನಮ್ಮ ಕೆಲಸ ಅಲ್ಲ’ ಎನ್ನುತ್ತ ರೆಹಮಾನ್ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರು. ಈ ವೇಳೆ ಆರ್ ವಿ ದೇಶಪಾಂಡೆ ಗರಂ ಆದರು.
`ನಿನ್ನ ಮನೆ ಮುರಿದರೆ ನೀನು ಸುಮ್ಮನೆ ಇರುತ್ತಿದ್ದೇಯಾ? ಸುಳ್ಳು ಹೇಳಬೇಡಿ, ನೀವು ಎಷ್ಟು ನಿಯತ್ತಿನಿಂದ ಕೆಲಸ ಮಾಡುತ್ತೀಯಾ? ಎಂದು ನನಗೆ ಗೊತ್ತಿದೆ’ ಎಂದು ಆಕ್ರೋಶದಿಂದ ಮಾತನಾಡಿದರು. `ಬಡ ಜನರಿಗೆ ಮೋಸ ಮಾಡಬೇಡಿ. ಮನೆ ಹಾನಿ ಆದವರಿಗೆ ಕೂಡಲೇ ಪರಿಹಾರ ನೀಡಿ’ ಎಂದು ತಾಕೀತು ಮಾಡಿದರು. ರೆಹಮಾನ್ ಅವರನ್ನು ಅಮಾನತು ಮಾಡುವಂತೆ ಅವರು ಮೇಲಧಿಕಾರಿಗಳಿಗೆ ಸೂಚಿಸಿದರು.
ಶಾಸಕ ಆರ್ ವಿ ದೇಶಪಾಂಡೆ ಅವರು ಕಂದಾಯ ಅಧಿಕಾರಿಯನ್ನು ತರಾಠೆಗೆ ತೆಗೆದುಕೊಂಡ ವಿಡಿಯೋ ಇಲ್ಲಿ ನೋಡಿ..