ಹೊನ್ನಾವರದ ಗೇರುಸೊಪ್ಪ ವಲಯ ಅರಣ್ಯಾಧಿಕಾರಿ ಕಾರ್ತಿಕ್ ಕಂಬಳಿ ಸಂಚರಿಸುತ್ತಿದ್ದ ಬುಲೆರೋ ವಾಹನ ಪಲ್ಟಿಯಾಗಿದೆ. ಬುಲೆರೋ ಓಡಿಸುತ್ತಿದ್ದ ಶಂಕರ್ ನಾಯ್ಕ ಅವರಿಗೆ ಪೆಟ್ಟಾಗಿದ್ದು, ಸದ್ಯ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಹುಬ್ಬಳ್ಳಿಯ ಆಳಗುಂಡಗಿಯ ಕಾರ್ತಿಕ್ ಕಂಬಳಿ ಅವರು ಕಳೆದ 9 ತಿಂಗಳಿನಿoದ ಗೇರುಸೊಪ್ಪ ವಲಯದಲ್ಲಿ ಅರಣ್ಯಾಧಿಕಾರಿಯಾಗಿದ್ದಾರೆ. ಸದ್ಯ ಕಾರ್ತಿಕ್ ಕಂಬಳಿಯವರು ಅರಣ್ಯ ಇಲಾಖೆ ನೀಡಿದ ವಸತಿಗೃಹದಲ್ಲಿ ವಾಸವಾಗಿದ್ದಾರೆ. ಕಚೇರಿ ಕೆಲಸಕ್ಕಾಗಿ ಅವರು ಇಲಾಖೆ ನೀಡಿದ ಬುಲೆರೋ ಜೀಪ್ ಬಳಸುತ್ತಿದ್ದು, ಕುದ್ರಗಿ ನಗರಬಸ್ತಿಕೇರಿಯ ಹುಂಜನಮಕ್ಕಿ ಶಂಕರ್ ನಾಯ್ಕ ಆ ಜೀಪಿಗೆ ಚಾಲಕರಾಗಿದ್ದಾರೆ.
ಮಾರ್ಚ 25ರ ಮಧ್ಯಾಹ್ನ ಅದೇ ಜೀಪಿನ ಮೂಲಕ ಕಾರ್ತಿಕ್ ಕಂಬಳಿ ಅವರು ಹೊನ್ನಾವರ ವಿಭಾಗ ಕಚೇರಿ ತೆರಳಿದ್ದರು. ಕಚೇರಿ ಕೆಲಸ ಮುಗಿಸಿ ಕೇಂದ್ರಸ್ಥಾನ ಗೇರುಸೊಪ್ಪಾಗೆ ಹಿಂತಿರುಗುತ್ತಿದ್ದರು. ಸರಳಗಿ ಗ್ರಾಮದ ದೇವರಗದ್ದೆ ಬಳಿ ಅವರ ಜೀಪಿಗೆ ಆಕಳು ಅಡ್ಡ ಬಂದಿತು. ಜೀಪು ಆಕಳಿಗೆ ಗುದ್ದುವುದನ್ನು ತಪ್ಪಿಸುವುದಕ್ಕಾಗಿ ಶಂಕರ್ ನಾಯ್ಕ ಏಕಾಏಕಿ ಬ್ರೆಕ್ ಒತ್ತಿದರು.
ಆಗ ಆ ಬುಲೇರೋ ಅಲ್ಲಿಯೇ ಪಲ್ಟಿಯಾಗಿದ್ದು, ವಲಯ ಅರಣ್ಯಾಧಿಕಾರಿ ಕಾರ್ತಿಕ್ ಕಂಬಳಿ ಅಪಾಯದಿಂದ ಪಾರಾದರು. ಅಪಘಾತವನ್ನು ನೋಡಿದ ಸ್ಥಳೀಯರು ಜಮಾಯಿಸಿ ಜೀಪಿನಲ್ಲಿದ್ದವರನ್ನು ಉಪಚರಿಸಿದರು. ಚಾಲಕ ಶಂಕರ ನಾಯ್ಕ ಅವರಿಗೆ ಪೆಟ್ಟಾಗಿರುವುದು ಈ ವೇಳೆ ಗಮನಕ್ಕೆ ಬಂದಿತು. ಶಂಕರ್ ನಾಯ್ಕ ಅವರನ್ನು ಊರಿನವರ ಸಹಕಾರದಲ್ಲಿ ಕಾರ್ತಿಕ್ ಕಂಬಳಿ ಅವರು ಹೊನ್ನಾವರದ ಶ್ರೀದೇವಿ ಆಸ್ಪತ್ರೆಗೆ ಕರೆದೊಯ್ದರು.
ಅದಾದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಂಕರ ನಾಯ್ಕರನ್ನು ಅವರ ಕುಟುಂಬದವರು ಮಣಿಪಾಲಿಗೆ ದಾಖಲಿಸಿದರು. ಅದಾ ನಂತರ ಹಿರಿಯ ಅಧಿಕಾರಿಗಳ ಬಳಿ ಚರ್ಚಿಸಿದ ವಲಯ ಅರಣ್ಯಾಧಿಕಾರಿ ಕಾರ್ತಿಕ್ ಕಂಬಳಿ ಅವರು `ಶಂಕರ್ ನಾಯ್ಕರ ದುಡುಕು ಚಾಲನೆ ಅಪಘಾತಕ್ಕೆ ಕಾರಣ’ ಎಂದು ಪೊಲೀಸ್ ದೂರು ನೀಡಿದರು. ಹೊನ್ನಾವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.