ಕಾರವಾರದ IDFC ಬ್ಯಾಂಕ್ ಮ್ಯಾನೇಜರ್ ನಿತೀನ್ ರೇವಣಕರ್ ಅತಿಯಾದ ಹಣದ ವ್ಯಾಮೋಹಕ್ಕೆ ಒಳಗಾಗಿ 14 ಲಕ್ಷ ರೂ ಹಣ ಕಳೆದುಕೊಂಡಿದ್ದಾರೆ. ಸೈಬರ್ ಕ್ರೆö ಜಾಲಕ್ಕೆ ಸಿಲುಕಿದ ಅವರು ತಮ್ಮ ಸ್ನೇಹಿತರ ಹಣವನ್ನು ಸಹ ನಾಪತ್ತೆ ಮಾಡಿದ್ದಾರೆ!
ಕಾರವಾರದ ಪದ್ಮನಾಭನಗರ ಗುರುಮಠದ ಬಳಿ ನಿತೀನ್ ರೇವಣಕರ್ ವಾಸವಾಗಿದ್ದಾರೆ. ಅವರು ಎಚ್‌ಡಿಎಫ್‌ಸಿ ಬ್ಯಾಂಕ್ ಮ್ಯಾನೇಜರ್ ಆಗಿದ್ದು, ಇದನ್ನು ಅರಿತ ಸೈಬರ್ ವಂಚಕರು ಅವರಿಗೆ ಹಣ ದುಪ್ಪಟ್ಟು ಮಾಡಿಕೊಡುವ ಆಮೀಷ ಒಡ್ಡಿದ್ದಾರೆ. ಅದನ್ನು ನಂಬಿದ ನಿತೀನ್ ರೇವಣಕರ್ ವಂಚಕರು ಹೇಳಿದ ಕಡೆಗಳೆಲ್ಲ ತಾವು ಕೂಡಿಟ್ಟ ಹಣವನ್ನು ಹೂಡಿಕೆ ಮಾಡಿದ್ದಾರೆ. ಅದಾದ ನಂತರ ತಮ್ಮ ನಾಲ್ವರು ಸ್ನೇಹಿತರ ಹಣವನ್ನು ಹೂಡಿಕೆ ಮಾಡಿಸಿ, ಮೋಸ ಹೋಗಿದ್ದಾರೆ!
ಸೈಬರ್ ವಂಚಕರ ಬಗ್ಗೆ ಎಚ್ಚರವಹಿಸುವಂತೆ ಪೊಲೀಸರು ಪ್ರತಿ ಶಾಲೆ-ಬ್ಯಾಂಕುಗಳಿಗೆ ಭೇಟಿ ನೀಡಿ ಅರಿವು ಮೂಡಿಸುತ್ತಿದ್ದಾರೆ. ಆದರೆ, ಬ್ಯಾಂಕ್ ಮ್ಯಾನೇಜರ್ ಆಗಿರುವ ನಿತೀನ್ ರೇವಣಕರ್ ಅವರಿಗೆ ಪೊಲೀಸರ ಕೂಗು ಕೇಳಿಲ್ಲ. ಹೀಗಾಗಿ ಬರೇ ಮೂರು ದಿನದಲ್ಲಿ ಒಟ್ಟು 1471050ರೂ ಹಣವನ್ನು ಅವರು ವಂಚಕರಿಗೆ ನೀಡಿ, ಇದೀಗ ಪೊಲೀಸರ ಮೊರೆ ಹೋಗಿದ್ದಾರೆ.
ಮಾರ್ಚ 25ರಂದು ನಿತಿನ್ ರೇವಣಕರ್ ಅವರ ಮೊಬೈಲಿಗೆ `ಆನ್‌ಲೈನ್ ಟ್ರೇಡಿಂಗ್ ಮಾಡಿ, ಹಣಗಳಿಸಿ’ ಎಂಬ ಸಂದೇಶ ಬಂದಿದೆ. ಕೂಡಲೇ ಆ ಸಂದೇಶಕ್ಕೆ ರಿಪ್ಲೆ ಮಾಡಿದ ಅವರು `ಹಣ ಮಾಡುವ ದಾರಿ ತಿಳಿಸಿ’ ಎಂದು ಅಂಗಲಾಚಿದ್ದಾರೆ. ಟೆಲಿಗ್ರಾಂ ಮೂಲಕ `VIP task google’ ಎಂಬ ಗ್ರೂಪಿಗೆ ನಿತಿನ್ ರೇವಣಕರ್ ಅವರನ್ನು ವಂಚಕರು ಸ್ವಾಗತಿಸಿದ್ದಾರೆ. ಅಲ್ಲಿ 650 ಸದಸ್ಯರಿದ್ದು, ಅವರೊಂದಿಗೆ ನಿತಿನ್ ರೇವಣಕರ್ ಸಹ ಹೂಡಿಕೆಯ ಪಾಠ ಆಲಿಸಿದ್ದಾರೆ.
ಗ್ರೂಪ್ ಅಡ್ಮೀನ್ ಆದ ಸುನೀಲಕುಮಾರ, ನೀತಾಕುಮಾರಿ, ತೇಜಸ್ ರಾಜಪುತ, ಅನನ್ಯ ಶರ್ಮಾ ಸುಲಭವಾಗಿ ಹೂಡಿಕೆ ಮಾಡಿ ಹಣ ಸಂಪಾದಿಸುವ ಬಗ್ಗೆ ಹೇಳಿದ್ದಾರೆ. ಇದನ್ನು ಆಸಕ್ತಿಯಿಂದ ಆಲಿಸಿದ ನಿತೀನ್ ರೇವಣಕರ್ ಮೊದಲು ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಖಾಲಿ ಮಾಡಿದ್ದಾರೆ. ಅದಾದ ನಂತರ ಸ್ನೇಹಿತರನ್ನು ಆ ಗುಂಪಿಗೆ ಸೇರಿಸಿ ಅವರ ಹಣವನ್ನು ತೊಡಿಸುವಂತೆ ಪ್ರಚೋದಿಸಿದ್ದಾರೆ.
ಮಾರ್ಚ 27ರಂದು ಹಣ ಹಿಂಪಡೆಯುವ ಪ್ರಯತ್ನ ನಡೆಸಿದಾಗ ಆ ಗುಂಪಿನಿ0ದ ನಿತೀನ್ ರೇವಣಕರ್ ಅವರನ್ನು ಹೊರದಬ್ಬಲಾಗಿದ್ದು, ಆಗ ಮೋಸ ಹೋಗಿರುವುದು ಅವರಿಗೆ ಅರಿವಾಗಿದೆ. ಕೂಡಲೇ ಕಾರವಾರದ ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ