ಬನವಾಸಿಯ ಕಾಳಸ್ವಾಮಿ ಮಾಗರಯ್ಯ (ಹೆಸರು ಬದಲಿಸಿದೆ) ಎಂಬಾತರು ಸರಾಯಿ ಜೊತೆ ಟಿಮೆಟ್ ಸೇವಿಸಿ ಸಾವನಪ್ಪಿದ್ದಾರೆ.
ಶಿರಸಿ ತಾಲೂಕಿನ ಬನವಾಸಿ ಬಳಿಯ ವಡಗೇರಿಯಲ್ಲಿ ಕಾಳಸ್ವಾಮಿ ಮಾಗರಯ್ಯ (38) ಅವರು ವಾಸವಾಗಿದ್ದರು. ಎಚ್‌ಐವಿ ಸೇರಿ ವಿವಿಧ ರೋಗಗಳಿಂದ ಅವರು ಬಳಲುತ್ತಿದ್ದರು. ವಾಸಿಯಾಗದ ರೋಗ ಬಂದ ಕಾರಣ ಅವರು ಮಾನಸಿಕವಾಗಿ ಕುಗ್ಗಿದ್ದರು. ಮದುವೆ ಆಗಿ 15 ವರ್ಷವಾದರೂ ಮಕ್ಕಳಾಗಿಲ್ಲ ಎಂದು ಅವರು ಕೊರಗುತ್ತಿದ್ದರು.
ತಮಗಿರುವ ಸಮಸ್ಯೆಗಳನ್ನು ಮರೆಯುವುದಕ್ಕಾಗಿ ಅವರು ಸರಾಯಿ ಸೇವನೆ ಶುರು ಮಾಡಿದ್ದರು. ಮಾರ್ಚ 26ರ ರಾತ್ರಿ 9.30ಕ್ಕೆ ಅವರು ಟಿಮೆಟ್ ಪುಡಿಯನ್ನು ನೀರಿನಲ್ಲಿ ಕಲಸಿ ಕುಡಿದರು. ಅಸ್ವಸ್ಥಗೊಂಡ ಕಾಳಸ್ವಾಮಿ ಮಾಗರಯ್ಯ ಅವರನ್ನು ಶಿರಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.
ಅಲ್ಲಿಂದ ಸಿಟಿ ಸ್ಕಾನ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು. ಪುನ: ಸರ್ಕಾರಿ ಆಸ್ಪತ್ರೆಗೆ ಕರೆ ತಂದಾಗ ಕಾಳಸ್ವಾಮಿ ಮಾಗರಯ್ಯ ಸಾವನಪ್ಪಿರುವ ಬಗ್ಗೆ ವೈದ್ಯರು ಘೋಷಿಸಿದರು. ಅವರ ಪತ್ನಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಬನವಾಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.