ಬಿಜೆಪಿ ಕೇಂದ್ರ ಸಮಿತಿಯಿಂದ ನೋಟಿಸ್ ಬಂದಿರುವುದನ್ನು ಒಪ್ಪಿಕೊಂಡ ಯಲ್ಲಾಪುರ ವಿಧಾನಸಭಾ ಕ್ಷೇತ್ರ ಶಾಸಕ ಶಿವರಾಮ ಹೆಬ್ಬಾರ್ `ಆ ನೋಟಿಸಿಗೆ ತಕ್ಕ ಉತ್ತರ ಕೊಟ್ಟಿದ್ದೇನೆ’ ಎಂದು ಹೇಳಿದ್ದಾರೆ. ಆದರೆ, ಆ ಉತ್ತರ ಏನು? ಎಂಬ ರಹಸ್ಯವನ್ನು ಬಿಟ್ಟುಕೊಟ್ಟಿಲ್ಲ.
ಶಿರಸಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು `ಬಿಜೆಪಿ ಶಿಸ್ತು ಸಮಿತಿಯಿಂದ ನನಗೂ ನೋಟೀಸ್ ಬಂದಿದೆ’ ಎಂದರು. `ಬಿಜೆಪಿಯವರು ಈಗಾಗಲೇ 5 ಜನರಿಗೆ ನೋಟಿಸ್ ನೀಡಿದ್ದಾರೆ. ಅದರಲ್ಲಿ ನಾನು ಒಬ್ಬ’ ಎಂದು ಪ್ರತಿಕ್ರಿಯಿಸಿದರು.
`ಬಸನಗೌಡ ಯತ್ನಾಳ ಅವರನ್ನು ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಿರುವುದಕ್ಕೂ ನನಗೂ ಯಾವುದೇ ಸಂಬoಧವಿಲ್ಲ. ನನಗೆ ನೀಡಿದ ನೋಟಿಸ್ಸಿನಲ್ಲಿ 76 ಗಂಟೆಯ ಒಳಗೆ ಉತ್ತರ ನೀಡಬೇಕು ಎಂದು ಸೂಚಿಸಲಾಗಿತ್ತು. ಆದರೆ ನಾನು 24 ಗಂಟೆಯ ಒಳಗೆ ಉತ್ತರ ನೀಡಿದ್ದೇನೆ’ ಎಂದರು.
`ಏನು ಉತ್ತರ ನೀಡಿದ್ದೀರಿ?’ ಎಂದು ಪ್ರಶ್ನಿಸಿದಾಗ ಆ ಬಗ್ಗೆ ಮೊದಲು ಶಿವರಾಮ ಹೆಬ್ಬಾರ್ ಮಾತನಾಡಲಿಲ್ಲ. ಮತ್ತೊಮ್ಮೆ ಪ್ರಶ್ನಿಸಿದಾಗ `ಏನು ಉತ್ತರ ಕಳಿಸಿದ್ದೇನೆ ಎಂದು ಮಾಧ್ಯಮದವರ ಮುಂದೆ ಹೇಳಲು ಆಗುವದಿಲ್ಲ. ನೀವು ಬಿಜೆಪಿ ಪಕ್ಷವನ್ನು ಕೇಳಿ ನೋಡಿ’ ಎಂದು ಹೇಳಿದರು.