ಮುರುಡೇಶ್ವರ ಬಳಿಯ ಕೊಡುಳು ಸರ್ಕಾರಿ ಶಾಲೆಗೆ ಲಕ್ಷ ರೂ ಬಹುಮಾನ ಸಿಕ್ಕಿದೆ. ಶಾಲೆಯಲ್ಲಿನ ಗುಣಾಮತ್ಮ ಚಟುವಟಿಕೆಗಳನ್ನು ಗಮನಿಸಿ ಸರ್ಕಾರ ಈ ಬಹುಮಾನ ನೀಡಿದೆ.
ಭಟ್ಕಳ ತಾಲೂಕಿನ ಮುರುಡೇಶ್ವರ ಬಳಿಯ ಕೊಡುಳು ಶಾಲೆಯಲ್ಲಿನ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರೆಯುತ್ತಿದೆ. ಶಿಕ್ಷಣದ ಜೊತೆ ಇನ್ನಿತರ ಚಟುವಟಿಕೆಗಳನ್ನು ಸಹ ಮಕ್ಕಳಿಗೆ ಕಲಿಸಲಾಗುತ್ತಿದೆ. ಜೀವನ ರೂಪಿಸುವ ಶಿಕ್ಷಣದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲು ಶಿಕ್ಷಕರು ಪ್ರಯತ್ನಿಸುತ್ತಿದ್ದಾರೆ.
ಶಾಲಾ ಆಡಳಿತ ಮಂಡಳಿ ಸಹ ಶಾಲೆಯ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮವಹಿಸಿದೆ. ಈ ಕಾರಣದಿಂದ 2023-24ನೇ ಸಾಲಿನ ರಾಜ್ಯಮಟ್ಟದ ಅತ್ಯುತ್ತಮ ಎಸ್‌ಡಿಎಂಸಿ ಎಂಬ ಬಿರುದು ಈ ಶಾಲೆಗೆ ಸಿಕ್ಕಿದೆ. ಅದರ ಭಾಗವಾಗಿ ಇದೀಗ ಶಿಕ್ಷಣ ಇಲಾಖೆ ಶಾಲೆಗೆ 1 ಲಕ್ಷ ರೂ ಬಹುಮಾನ ನೀಡಿದೆ.
ಈ ಸರ್ಕಾರಿ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘವನ್ನು ರಚಿಸಲಾಗಿದೆ. ಶಾಲಾ ಅಭಿವೃದ್ಧಿಗೆ ಸಂಘದವರು ಕೈ ಜೋಡಿಸಿದ್ದಾರೆ. ಸಾಕಷ್ಟು ದಾನಿಗಳು ಶೈಕ್ಷಣಿಕ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಪರಿಣಾಮ ಶಾಲೆಯ ಮೇಲ್ಚಾವಣಿ ದುರಸ್ಥಿ, ಬಣ್ಣ ಬಡಿಯುವಿಕೆ, ಮಕ್ಕಳ ಕಲಿಕೆಗೆ ಕಂಪ್ಯುಟರ್, ಪ್ರೊಜೆಕ್ಟರ್, ಸೌಂಡ್ ಸಿಂಸ್ಟಮ್, ಕುಡಿಯುವ ನೀರಿನ ಸೌಲಭ್ಯಗಳನ್ನು ಅಚ್ಚುಕಟ್ಟಾಗಿ ಅಳವಡಿಸಲಾಗಿದೆ. ಇದನ್ನು ಪರಿಗಣಿಸಿ ರಾಜ್ಯಮಟ್ಟದ ಪ್ರಶಸ್ತಿಗೆ ಕೊಡುಳು ಶಾಲೆ ಆಯ್ಕೆಯಾಗಿದೆ.