ಯಲ್ಲಾಪುರ ತಾಲೂಕಿನ ಹುಟಕಮನೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಗುಡ್ಡ ಅಗೆದಿರುವುದರಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
ಶನಿವಾರ ತಹಶೀಲ್ದಾರ್ ಕಚೇರಿಯ ಮೂಲಕ ಅಲ್ಲಿನ ಜನ ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರೆ. `ಅವೈಜ್ಞಾನಿಕವಾಗಿ ಗುಡ್ಡ ಕೊರೆದ ಪರಿಣಾಮ ಭೂ ಕುಸಿತವಾಗುವ ಸಾಧ್ಯತೆಯಿದ್ದು, ಭೂ ಕುಸಿತ ಆಗದಂತೆ ತಡೆಯಲು ತುರ್ತು ಕ್ರಮ ಜರುಗಿಸಿ’ ಎಂದು ಆ ಭಾಗದ ಜನ ಮನವಿ ಮಾಡಿದ್ದಾರೆ.
`ಹಳವಳ್ಳಿಯ ದೀಪಕ ನಾಯ್ಕ ಎಂಬಾತರು ಹುಟಕಮನೆಯ 61/6ರ ಕ್ಷೇತ್ರವನ್ನು ಖರೀದಿಸಿದ್ದಾರೆ. ಅಲ್ಲಿನ ಗುಡ್ಡ ಪ್ರದೇಶವನ್ನು ಅವರು ಅವೈಜ್ಞಾನಿಕ ರೀತಿಯಲ್ಲಿ ತುಂಡರಿಸಿದ್ದರಿoದ ತಳಭಾಗದ ತೋಟಗಳಿಗೆ ಮಣ್ಣು ಬಿದ್ದಿದೆ. ಇಲ್ಲಿದ್ದ ಕಾಲುವೆ ಸಹ ಮುಚ್ಚಿದ್ದರಿಂದ ಸರಾಗವಾಗಿ ನೀರು ಹೋಗಲು ಜಾಗವಿಲ್ಲ. ಭೂ ಕುಸಿತ ಉಂಟಾದಲ್ಲಿ ಜೀವಹಾನಿ ಸಾಧ್ಯತೆಯನ್ನು ಅಲ್ಲಗಳೆಯುವ ಹಾಗಿಲ್ಲ’ ಎಂದು ಊರಿನವರು ಹೇಳಿದ್ದಾರೆ.
`ಯಲ್ಲಾಪುರ ತಾಲೂಕಿನ ಹಲವು ಕಡೆ ಈಚೆಗೆ ಸಾಕಷ್ಟು ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗುತ್ತಿದೆ. ಹುಟಕಮನೆ ಪ್ರದೇಶದಲ್ಲಿ ಸಹ ಗುಡ್ಡ ಕುಸಿತದ ಆತಂಕ ಎದುರಾಗಿದ್ದು, ಅದನ್ನು ತಡೆಯಲು ಕಾಳಜಿವಹಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ಸುಬ್ರಾಯ ಸಭಾಹಿತ, ಪ್ರಶಾಂತ ಸಭಾಹಿತ, ವಿಶ್ವೇಶ್ವರ ಸಭಾಹಿತ, ತಿಮ್ಮಣ್ಣ ಸಭಾಹಿತ, ನಾಗೇಶ ಗಾಂವ್ಕರ್, ಗಣಪತಿ ಗಾಂವ್ಕರ್, ವಿಶ್ವೇಶ್ವರ ಸಭಾಹಿತ, ಗೋಪಾಲಕೃಷ್ಣ ಸಭಾಹಿತ್ ತಹಶೀಲ್ದಾರ್ ಕಚೇರಿಗೆ ಆಗಮಿಸಿ ತಮ್ಮ ಸಮಸ್ಯೆ ವಿವರಿಸಿದರು. `ತಮ್ಮ ತೋಟ ಹಾಗೂ ಮನೆಗಳನ್ನು ರಕ್ಷಿಸಿ’ ಎಂದು ಅವರು ಮನವಿ ಮಾಡಿದರು. `ಸಂಭವನೀಯ ಅನಾಹುತವನ್ನು ತಡೆಯಬೇಕು. ಏನಾದರೂ ಅವಘಡ ನಡೆದರೆ ಭೂ ಮಾಲಕರನ್ನು ಹೊಣೆಗಾರರನ್ನಾಗಿ ಮಾಡಬೇಕು’ ಎಂದು ಆಗ್ರಹಿಸಿದರು.