ಶಿರಸಿ-ಸಿದ್ದಾಪುರ ರಸ್ತೆಯ ಕಾಳಿಕಾ ಭವಾನಿ ಹೈಸ್ಕೂಲ್ ಎದುರಿನ ಅಂಗಡಿಗಳ ಮೇಲೆ ಕಳ್ಳರ ಕಣ್ಣು ಬಿದ್ದಿದೆ. ಇಲ್ಲಿನ ಮೂರು ಅಂಗಡಿಗಳಿಗೆ ನುಗ್ಗಿದ ಕಳ್ಳರು ಅಲ್ಲಿದ್ದ ಸಾಮಗ್ರಿಗಳನ್ನು ದೋಚಿ ಪರಾರಿಯಾಗಿದ್ದಾರೆ.
ಸಿದ್ದಾಪುರ ತಾಲೂಕಿನ ಕಾನಸೂರು ಬಳಿಯ ಕಾಳಿಕಾ ಭವಾನಿ ಹೈಸ್ಕೂಲ್ ಎದುರು ಕಾನಸೂರು ಜಾರಗಲ್‌ನ ಮಹೇಶ ನಾಯ್ಕ ಮಳಿಗೆ ನಿರ್ಮಿಸಿಕೊಂಡಿದ್ದಾರೆ. `ಕಾಳಿಕಾ ಭವಾನಿ ಫಾಸ್ಟ್ಪುಡ್’ ಹೆಸರಿನ ಅಡಿ ಅವರು ಅಲ್ಲಿ ವ್ಯಾಪಾರ ನಡೆಸುತ್ತಾರೆ. ಆ ಮಳಿಗೆಯ ಪಕ್ಕದಲ್ಲಿ ಗಟ್ಟಿಕೈ ಗಣೇಶ ಹೆಗಡೆ ಅವರ `ನ್ಯೂ ಕಾಳಿಕಾ ಭವಾನಿ ಹೋಟೆಲ್’ ಉದ್ದಿಮೆ ಮಾಡಿಕೊಂಡಿದ್ದಾರೆ. ಅದಕ್ಕೆ ಹೊಂದಿಕೊ0ಡು ಜಾರಗಲ್ ಸಂಜಯ ನಾಯ್ಕ ಅವರು ಸಹ `ಕಾಳಿಕಾ ಫಾಸ್ಟಫುಡ್’ ಎಂಬ ಮಳಿಗೆ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ.
ಮಾರ್ಚ 27ರ ರಾತ್ರಿ 10.30ರ ಅವಧಿಗೆ ಎಲ್ಲರೂ ಅವರವರ ವ್ಯಾಪಾರ ಮುಗಿಸಿ ಬಾಗಿಲು ಬಂದ್ ಮಾಡಿದ್ದಾರೆ. ಅದಾದ ನಂತರ ಮನೆಗೆ ತೆರಳಿದ್ದು, ಮರುದಿನ ಬೆಳಗ್ಗೆ 9.30ಕ್ಕೆ ಮಳಿಗೆಯ ಬಾಗಿಲು ತೆರೆದಾಗ ಅಲ್ಲಿ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಮಹೇಶ ನಾಯ್ಕ ಅವರ ಕಾಳಿಕಾ ಭವಾನಿ ಫಾಸ್ಟ್ಪುಡ್ ಮಳಿಗೆಯ ಹಿಂದೆ ಹೋದ ಕಳ್ಳರು ಅಲ್ಲಿನ ಶೆಡ್’ಗೆ ಅಳವಡಿಸಿದ್ದ ಬೋಲ್ಟುಗಳನ್ನು ಕಳಚಿದ್ದಾರೆ. ಅಲ್ಲಿಂದ ಒಳಗೆ ಪ್ರವೇಶಿಸಿ ಯುಪಿಎಸ್ ಬ್ಯಾಟರಿ, ಸೋಲಾರ್ ಬ್ಯಾಟರಿಗಳನ್ನು ಅಪಹರಿಸಿದ್ದಾರೆ.
ಕಾಳಿಕಾ ಭವಾನಿ ಫಾಸ್ಟ್ಪುಡ್ ಮಳಿಗೆ ಮೂಲಕವೇ ನ್ಯೂ ಕಾಳಿಕಾ ಭವಾನಿ ಹೋಟೆಲ್ ಹಾಗೂ ಕಾಳಿಕಾ ಫಾಸ್ಟಫುಡ್ ಪ್ರವೇಶಿಸಿದ್ದಾರೆ. ಆ ಮೂರು ಮಳಿಗೆಗಳಲ್ಲಿದ್ದ ಎಣ್ಣೆ ಕಡಾಯಿ, ಬಗೆ ಬಗೆಯ ಪಾತ್ರೆ, ಗ್ಯಾಸ್ ಸಿಲೆಂಡರ್ ಸೇರಿ 99300ರೂ ಮೌಲ್ಯದ ಸಾಮಗ್ರಿಗಳನ್ನು ದೋಚಿದ್ದಾರೆ. ಸರಣಿ ಅಂಗಡಿ ಕಳ್ಳತನದಿಂದ ಕಾನಸೂರಿನ ಜನ ಆತಂಕಕ್ಕೆ ಒಳಗಾದರು. ಕಳ್ಳತನ ನಡೆದ ಬಗ್ಗೆ ಮಹೇಶ ನಾಯ್ಕರು ಪೊಲೀಸ್ ದೂರು ನೀಡಿದ್ದು, ಸಿದ್ದಾಪುರ ಪೊಲೀಸರು ಕಳ್ಳರ ಹುಡುಕಾಟ ನಡೆಸಿದ್ದಾರೆ.