`ಉಚಿತ ಎಂಬ ಪದವೇ ಸಮಾಜಕ್ಕೆ ಮಾರಕ’ ಎಂದು ಹಳಿಯಾಳ ವಿಧಾನಸಭಾ ಕ್ಷೇತ್ರದ ಶಾಸಕ ಆರ್ ವಿ ದೇಶಪಾಂಡೆ ಹೇಳಿದ್ದಾರೆ. `ಉಚಿತ ಕೊಡುಗೆ ಎಂಬುದು ತೀರಾ ಅಪಾಯಕಾರಿ’ ಎಂದು ಅವರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಉಚಿತ ಯೋಜನೆಗಳ ಬಗ್ಗೆ ಪ್ರತಿಪಕ್ಷಗಳಿಂದ ಆಗಾಗ ಆಕ್ಷೇಪವ್ಯಕ್ತವಾಗುತ್ತಿದೆ. ಆಡಳಿತ ಪಕ್ಷದವರು ಆಗಾಗ ಉಚಿತ ಯೋಜನೆಗಳನ್ನು ವಿರೋಧಿಸಿದ್ದು ಇದೆ. ಇದೀಗ ಕರ್ನಾಟಕ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರೂ ಆಗಿರುವ ಹಳಿಯಾಳ ವಿಧಾನಸಭಾ ಕ್ಷೇತ್ರದ ಶಾಸಕ ಆರ್ ವಿ ದೇಶಪಾಂಡೆ ಸಹ `ಉಚಿತ ಎಂಬ ಪದವೇ ಮಾರಕ’ ಎಂದು ಹೇಳಿದ್ದಾರೆ.
ದಾಂಡೇಲಿಯ ಅಂಬೇವಾಡಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. `ಜನರಿಗೆ ಏನನ್ನೂ ಉಚಿತವಾಗಿ ನೀಡಬಾರದು. ಪ್ರತಿಯೊಂದು ಸೇವೆಗೂ ಶುಲ್ಕ ನಿಗದಿಪಡಿಸಬೇಕು’ ಎಂದು ಅವರು ತಮ್ಮ ಅಭಿಪ್ರಾಯವನ್ನು ಜನರ ಮುಂದಿಟ್ಟಿದ್ದಾರೆ.
`ಶಕ್ತಿ ಯೋಜನೆ ಅಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಈ ಯೋಜನೆಯನ್ನು ಪುರುಷರಿಗೆ ಸಹ ವಿತರಿಸಬೇಕು ಎಂಬ ಬೇಡಿಕೆ ಬಂದಿತ್ತು. ಎಲ್ಲವನ್ನು ಉಚಿತವಾಗಿ ನೀಡಿದರೆ ಸಂಸ್ಥೆ ನಡೆಸಲು ಅಸಾಧ್ಯ’ ಎಂದವರು ಹೇಳಿದ್ದಾರೆ.
`ಸಾರಿಗೆ ಸಂಸ್ಥೆಗಳಿಗೆ ಪ್ರತಿ ವರ್ಷ ಸಿಬ್ಬಂದಿ ನೇಮಕ, ಹೊಸ ಬಸ್ ಖರೀದಿ ಅನಿವಾರ್ಯ. ಪ್ರಯಾಣ ದರ ಹೆಚ್ಚಿಸಿದರೆ ವಿರೋಧವ್ಯಕ್ತವಾಗುತ್ತದೆ. ಉಚಿತವಾಗಿ ನೀಡಿದರೆ ಸಂಸ್ಥೆ ನಡೆಸಲು ಕಷ್ಟವಾಗುತ್ತದೆ’ ಎನ್ನುತ್ತ ಅವರು ಸರ್ಕಾರದ ಸಮಸ್ಯೆಯನ್ನು ಜನರಿಗೆ ಅರ್ಥ ಮಾಡಿಸಿದರು.