ಶಿರಸಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಬಗ್ಗೆ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿದ್ದಾರೆ. `ಆ ಕೆಲಸವನ್ನು ನಾನು ಮಂಜೂರಿ ಮಾಡಿಸಿದ್ದು… ಈ ಕೆಲಸವನ್ನೂ ನಾನೇ ಮಂಜೂರಿ ಮಾಡಿಸಿದ್ದು’ ಎಂದು ಅವರು ಹೇಳಿಕೊಂಡಿದ್ದಾರೆ.
ತಾನೂ ಶಾಸಕನಾಗಿದ್ದ ಅವಧಿಯಲ್ಲಿ ಚಾಲನೆ ನೀಡಿದ ಕೆಲಸಗಳನ್ನು ಈಗ ಮುಗಿಸಿದ ಕಾಂಗ್ರೆಸ್ ಸರ್ಕಾರ ಅದನ್ನು ತನ್ನ ಸಾಧನೆ ಎನ್ನುತ್ತಿರುವ ಬಗ್ಗೆ ಕಿಡಿಕಾರಿದ್ದಾರೆ. `ಶಿರಸಿ ಶಾಸಕರು ಹೆಚ್ಚು ಹೆಚ್ಚು ಹೊಸ ಕೆಲಸ ಮಂಜೂರಿ ಮಾಡಿ ತಮ್ಮ ಸಾಧನೆ ಪ್ರದರ್ಶಿಸಲಿ’ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಸಲಹೆ ನೀಡಿದ್ದಾರೆ.
`ಶಿರಸಿಯಲ್ಲಿನ ಸಂಚಾರಿ ಪೊಲೀಸ್ ಠಾಣೆ, ಪ್ರಾದೇಶಿಕ ಸಾರಿಗೆ ಕಚೇರಿ, ಹೈಟೆಕ್ ಆಸ್ಪತ್ರೆ, ಒಳ ಕ್ರೀಡಾಂಗಣ, ಆಡಳಿತ ಸೌಧ ಸೇರಿ ಇನ್ನು ಹಲವು ಅಭಿವೃದ್ಧಿ ಕೆಲಸವನ್ನು ಬಿಜೆಪಿ ಸರ್ಕಾರ ಮಂಜೂರಿ ಮಾಡಿತ್ತು. ಅಂತೂ ಇಂತೂ ಎರಡು ವರ್ಷ ಗುದ್ದಾಡಿ ಇದೀಗ ಕಾಂಗ್ರೆಸ್ ಸರ್ಕಾರ ಆ ಕೆಲಸ ಮುಗಿಸಿದೆ. ಆದರೆ, ಇದನ್ನು ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದೆ’ ಎಂದು ಕಾಗೇರಿ ಕಿಡಿಕಾರಿದರು.
`ಮಂಜೂರಿ ಮಾಡಿಸಿದ ಸಾಕಷ್ಟು ಕೆಲಸಗಳು ಈಗಾಗಲೇ ವಿಳಂಬವಾಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆ ಕೆಲಸದ ಗುಣಮಟ್ಟ ಕಳಪೆಯಾಗಿರುವ ಬಗ್ಗೆಯೂ ಜನ ದೂರಿದ್ದಾರೆ. ಹೀಗಿರುವಾಗ ಅದನ್ನು ತಮ್ಮ ಸಾಧನೆ ಎಂದು ಬಣ್ಣಿಸಿಕೊಳ್ಳುವ ನೈತಿಕತೆ ಶಾಸಕರಿಗೆ ಇಲ್ಲ’ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
`ಕೆಲವಡೆ ಕಾಮಗಾರಿ ಮುಗಿದು ಆರು ತಿಂಗಳ ನಂತರ ಜನತೆಗೆ ಲಭ್ಯವಾಗಿದೆ. ನಾನು ಮಂಜೂರಿ ಮಾಡಿಸಿದ್ದ ರಸ್ತೆ ಸೇರಿ ವಿವಿಧ ಕಾಮಗಾರಿಗಳ ಕೆಲಸ ಆಗುವುದು ಇನ್ನೂ ಬಾಕಿಯಿದೆ. ಕೆಲವಡೆ ಮಂಜೂರಿಯಾದ ಹಣವನ್ನು ಬಳಸದೇ ಕೆಲಸಕ್ಕೆ ತಡೆವೊಡ್ಡಲಾಗಿದೆ’ ಎಂದು ದೂರಿದರು.
`ಹೊಸ ಶಾಸಕರು ಹಳೆ ಕೆಲಸವನ್ನು ಮಾಡಲೇಬೇಕು. ಅದರೊಂದಿಗೆ ಹೆಚ್ಚಿನ ಪ್ರಮಾಣದಲ್ಲಿ ಹೊಸ ಕೆಲಸವನ್ನು ಶುರು ಮಾಡಬೇಕು. ಈ ಹಿಂದೆ ಮಂಜೂರಿ ಮಾಡಿದ್ದ ಕೆಲಸ ನಿಲ್ಲಿಸಲು ಸಾಧ್ಯವಿಲ್ಲ’ ಎಂದು ಹೇಳಿದರು. `ಭ್ರಷ್ಟಾಚಾರ, ಬೆಲೆ ಏರಿಕೆ, ಒಲೈಕೆ ರಾಜಕಾರಣದಿಂದ ಕಾಂಗ್ರೆಸ್ ಸರ್ಕಾರ ದಿಕ್ಕೆಟ್ಟಿದೆ. ಆಡಳಿತದ ಮೇಲೆ ಜನರ ಆಕ್ರೋಶ ಹೆಚ್ಚಾಗಿದೆ’ ಎಂದು ದೂರಿದರು.
`ರಾಜ್ಯ ಸರ್ಕಾರದ ಆಡಳಿತದಲ್ಲಿ ಗಂಭೀರತೆ ಇಲ್ಲದ ಕಾರಣ ಕೇಂದ್ರದ ಯೋಜನೆಗಳ ಅನುಷ್ಠಾನಕ್ಕೆ ತೊಂದರೆಯಾಗುತ್ತಿದೆ. ಟವರ್ ನಿರ್ಮಾಣ, ಹೆದ್ದಾರಿ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತ ಹಾಗೂ ತಾಲೂಕಾಡಳಿತದಿಂದ ಆಡಳಿತ ಕ್ರಮ ಆಗುತ್ತಿಲ್ಲ. ಇದರಿಂದ ಎಲ್ಲಾ ಕೆಲಸ ವಿಳಂಬವಾಗುತ್ತಿದೆ. ಅಭಿವೃದ್ಧಿ ಕೆಲಸಗಳಿಗೆ ಉಸ್ತುವಾರಿ ಸಚಿವರು ಸಹಕಾರ ಕೊಡಬೇಕು’ ಎಂದು ಆಗ್ರಹಿಸಿದರು. `ಮೋದಿ ಹಾಗೂ ಗಡ್ಕರಿ ಅನುದಾನ ನೀಡಿದ್ದಾರೆ. ಆದರೆ, ಅಭಿವೃದ್ಧಿ ಕೆಲಸ ಆಗದೇ ಜನರಿಗೆ ಸಮಸ್ಯೆ ಆಗಿದೆ. ವಿಳಂಬಕ್ಕೆ ಕಾಂಗ್ರೆಸ್ ಸರ್ಕಾರ ಕಾರಣ’ ಎಂದು ದೂರಿದರು.
ಸಂಸದ ವಿಶ್ವೇಶ್ವರ ಹೆಗಡೆ ಹೇಳಿದ್ದೇನು? ಇಲ್ಲಿ ನೋಡಿ..