`ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ರಂಜಾನ್ ಹಬ್ಬದ ಅವಧಿಯಲ್ಲಿ 32 ಲಕ್ಷ ಮುಸ್ಲಿಂ ಕುಟುಂಬಗಳಿಗೆ `ಸೌಗತ್-ಎ-ಮೋದಿ’ ಎಂಬ ಕಿಟ್ ನೀಡುತ್ತಿದ್ದಾರೆ. ಈ ಕ್ರಮ ಸ್ವಾಗತಾರ್ಹವಾದರೂ, ಯುಗಾದಿ ಹಬ್ಬದ ಆಚರಣೆ ಹೊಸ್ತಿಲಿನಲ್ಲಿರುವ ಬಡ ಹಿಂದು ಸಮುದಾಯವನ್ನು ಬಿಜೆಪಿ ನಿರ್ಲಕ್ಷಿಸಿದೆ’ ಎಂದು ಯಲ್ಲಾಪುರ ತಾಲೂಕಾ ಯುವ ಕಾಂಗ್ರೆಸ್ ಅಧ್ಯಕ್ಷ ಗಣೇಶ ಹೆಗಡೆ ದೂರಿದ್ದಾರೆ.
`ಕಾಂಗ್ರೆಸ್ ಪಕ್ಷದವರು ಮಾತ್ರ ಮುಸ್ಲಿಂ ಓಲೈಕೆ ರಾಜಕಾರಣ ಮಾಡುತ್ತಾರೆ ಎಂದು ಬಿಜೆಪಿಗರು ದೂರುತ್ತಿದ್ದರು. ಇದೀಗ ಬಿಜೆಪಿಗರು ಸಹ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಆದರೆ, ಕೋಟ್ಯಂತರ ಸಂಖ್ಯೆಯಲ್ಲಿರುವ ಹಿಂದುಗಳನ್ನು ಅವರು ದೂರ ಮಾಡಿದ್ದಾರೆ’ ಎಂದು ಗಣೇಶ ಹೆಗಡೆ ದೂರಿದ್ದಾರೆ. `ಬಿಜೆಪಿಗರು ಎಲ್ಲಾ ಸಮುದಾಯದವರನ್ನು ಸರಿಸಮಾನವಾಗಿ ನೋಡುವುದೇ ಆದರೆ ಹಿಂದು ಸಮುದಾಯದವರಿಗೆ ಸಹ ಕೊಡುಗೆ ನೀಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.
`ಕಾಂಗ್ರೆಸ್ ಪಕ್ಷ ಎಲ್ಲಾ ಸಮುದಾಯವನ್ನು ಗೌರವಿಸುತ್ತದೆ. ಆದರೆ, ರಂಜಾನ್ ಹಬ್ಬದ ವೇಳೆ ಕಾಂಗ್ರೆಸ್ ಉಡುಗರೆ ನೀಡಿದ್ದರೆ ಅದನ್ನು ಬಿಜೆಪಿ ಎಂದಿಗೂ ಸಹಿಸುತ್ತಿರಲಿಲ್ಲ. ಆ ವೇಳೆ ಕಾಂಗ್ರೆಸ್ ಕೊಡುಗೆಗೆ ಕೋಮು ಬಣ್ಣ ಹಚ್ಚಿ ಪಕ್ಷಕ್ಕೆ ಹಿಂದು ವಿರೋಧಿ ಎಂದು ಬಿಂಬಿಸುತ್ತಿದ್ದರು. ಇದೀಗ ಬಿಜೆಪಿ ಸಹ ಅಲ್ಪ ಸಂಖ್ಯಾತರ ಓಲೈಕೆಗಾಗಿ ಹಿಂದುಗಳನ್ನು ಮರೆತಿದೆ’ ಎಂದು ಗಣೇಶ ಹೆಗಡೆ ಅಭಿಪ್ರಾಯಪಟ್ಟಿದ್ದಾರೆ.
`4 ಲಕ್ಷ ಕೋಟಿ ರೂಪಾಯಿಯ ಬಜೆಟಿನಲ್ಲಿ ಶೇ 1ರ ಪಾಲನ್ನು ಅಲ್ಪಸಂಖ್ಯಾತ ಸಮುದಾಯಕ್ಕೆ ನೀಡದರೆ ಬಿಜೆಪಿ ಅದನ್ನು ವಿರೋಧಿಸಿತು. ಕಾಂಗ್ರೆಸ್ ಮಂಡಿಸಿದ ಬಜೆಟನ್ನು ಹಲಾಲ್ ಬಜೆಟ್ ಎಂದು ನಿಂದಿಸಲಾಯಿತು. ಆದರೆ, ಬಿಜೆಪಿಯು ಇದೀಗ `ಸೌಗತ್-ಎ-ಮೋದಿ’ ಕಿಟ್ ನೀಡುವ ಬಗ್ಗೆ ಏಕೆ ಯಾರು ಮಾತನಾಡುತ್ತಿಲ್ಲ? ಎಂದು ಅವರು ಪ್ರಶ್ನಿಸಿದ್ದಾರೆ. `ಹಿಂದುತ್ವದ ಹೆಸರಿನಲ್ಲಿ ರಾಜಕಾರಣ ಮಾಡಿ ಅಮಾಯಕರ ದಾರಿ ತಪ್ಪಿಸುವ ಬಿಜೆಪಿ ನಾಯಕರು ತಮ್ಮ ಪ್ರಶ್ನೆಗೆ ಉತ್ತರಿಸಬೇಕು. ಹಿಂದುಗಳಿಗೆ ಅವರು ನೀಡಿದ ಕೊಡುಗೆ ಏನು? ಎಂದು ತಿಳಿಸಬೇಕು’ ಎಂದು ಗಣೇಶ ಹೆಗಡೆ ಒತ್ತಾಯಿಸಿದ್ದಾರೆ.