ಯುಗಾದಿ ಹಾಗೂ ರಂಜಾನ್ ಹಬ್ಬದ ವೇಳೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಸರಾಯಿ ಮಾರಾಟ ಹಾಗೂ ಸಾಗಾಟ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಜಿಲ್ಲೆಯ ಬಹುತೇಕ ಕಡೆ ರಂಜಾನ್ ಹಾಗೂ ಯುಗಾದಿ ಹಬ್ಬದ ನಿಮಿತ್ತ ಬೈಕ್ ರ‍್ಯಾಲಿ ಆಯೋಜಿಸಲಾಗಿದೆ. ಶೋಭಾಯಾತ್ರೆಗಳು ಅದ್ಧೂರಿಯಾಗಿ ನಡೆಯಲಿದೆ. ಮಾರ್ಚ 30ರಿಂದ ಏಪ್ರಿಲ್ 2ರವರೆಗೂ ಹಲವು ಕಡೆ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವುದು ಜಿಲ್ಲಾಡಳಿತದ ಹೊಣೆಯಾಗಿದೆ. ಈ ಹಿನ್ನಲೆ ಆಯಾ ದಿನಗಳ ಅವಧಿಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಮಾರ್ಚ್ 30ರಂದು ಬೆಳಗ್ಗೆ 6 ಗಂಟೆಯಿoದ ಮಾರ್ಚ್ 31 ಬೆಳಗ್ಗೆ 6 ಗಂಟೆಯವರೆಗೆ ಶಿರಸಿ, ಸಿದ್ದಾಪುರ ತಾಲೂಕು ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಮಾಡುವ ಹಾಗಿಲ್ಲ. ಮಾ 30ರಂದು ಬೆಳಗ್ಗೆ 6 ಗಂಟೆಯಿoದ ಏಪ್ರಿಲ್ 1 ಬೆಳಗ್ಗೆ 6 ಗಂಟೆಯವರೆಗೆ ಯಲ್ಲಾಪುರ ತಾಲೂಕಿನಲ್ಲಿಯೂ ಸರಾಯಿ ಮಾರಾಟವನ್ನು ನಿಷೇಧಿಸಲಾಗಿದೆ. ಮಾ 31ರಂದು ಬೆಳಗ್ಗೆ 6 ಗಂಟೆಯಿoದ ಏಪ್ರಿಲ್ 1 ಬೆಳಗ್ಗೆ 6 ಗಂಟೆಯವರೆಗೆ ಭಟ್ಕಳ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಾಗೂ ಏಪ್ರಿಲ್ 1ರ ಬೆಳಗ್ಗೆ 6ರಿಂದ ಏಪ್ರಿಲ್ 2 ರಾತ್ರಿ 12ಗಂಟೆಯವರೆಗೆ ಹೊನ್ನಾವರ ಕಾಸರಗೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ ತಡೆ ಒಡ್ಡಲಾಗಿದೆ.
`ಈ ಅವಧಿಯಲ್ಲಿ ಎಲ್ಲಾ ರೀತಿಯ ಬಾರ್, ವೈನ್ ಶಾಪ್ ಹಾಗೂ ಮದ್ಯದ ಅಂಗಡಿಗೆ ಬೀಗ ಹಾಕಬೇಕು. ಮದ್ಯ ಸಾಗಾಟಕ್ಕೂ ಅವಕಾಶ ಕೊಡಬಾರದು’ ಎಂದು ಜಿಲ್ಲಾಡಳಿತ ಸೂಚಿಸಿದೆ.