`ಶಿರಸಿಯಲ್ಲಿ ಬಿ ಆರ್ ಅಂಬೇಡ್ಕರ್ ಅವರ ಕಂಚಿನ ಪ್ರತಿಮೆ ಸ್ಥಾಪಿಸಬೇಕು’ ಎಂದು ಆಗ್ರಹಿಸಿ ಭೀಮಶಕ್ತಿ ಸಂಘಟನೆಯವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ತಹಶೀಲ್ದಾರ್ ಕಚೇರಿ ಮೂಲಕ ಆ ಪತ್ರವನ್ನು ಮುಖ್ಯಮಂತ್ರಿಗಳಿಗೆ ರವಾನಿಸಿದ್ದಾರೆ.
ಶಿರಸಿ ಆಡಳಿತ ಸೌಧದ ಮುಂದೆ ಬಿ ಆರ್ ಅಂಬೇಡ್ಕರ್ ಅವರ ಪೂರ್ಣಾಕೃತಿಯ ಕಂಚಿನ ಪ್ರಥಿಮೆ ಸ್ಥಾಪಿಸಬೇಕು’ ಎಂದು ಭೀಮಶಕ್ತಿ ಸಂಘಟನೆಯವರು 2012ರಿಂದ ಹೋರಾಟ ನಡೆಸುತ್ತಿದ್ದಾರೆ. 13 ವರ್ಷಗಳ ಹಿಂದೆಯೂ ಮುಖ್ಯಮಂತ್ರಿ ಕಚೇರಿಗೆ ಸಂಘಟನೆಯವರು ಈ ಬಗ್ಗೆ ಪತ್ರ ರವಾನಿಸಿದ್ದರು. ಆದರೆ, ಈವರೆಗೂ ಅವರ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಇದನ್ನು ಉಲ್ಲೇಖಿಸಿ ಶನಿವಾರ ಸಂಘಟನೆಯವರು ಮತ್ತೊಂದು ಪತ್ರ ಬರೆದಿದ್ದಾರೆ.
`2025ರ ಏಪ್ರಿಲ್ 14ರ ಅಂಬೇಡ್ಕರ್ ಜಯಂತಿಯ ಒಳಗೆ ಇಲ್ಲಿ ಕಂಚಿನ ಪ್ರತಿಮೆ ಸ್ಥಾಪಿಸಬೇಕು’ ಎಂದು ಭೀಮ ಶಕ್ತಿ ಸಂಘಟನೆ ಪ್ರಮುಖರಾದ ಪ್ರಭಾಕರ ಜೋಗಲೇಕರ್, ರಘು ಕಾನಡೆ, ಬಿ ಶಿವಾಜಿ ಬನವಾಸಿ, ಅಶೊಕ ಭಜಂತ್ರಿ ಒತ್ತಾಯಿಸಿದ್ದಾರೆ. ಇದರೊಂದಿಗೆ `ಪ್ರತಿ ವರ್ಷ ಏಪ್ರಿಲ್ 10ರಿಂದ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗುತ್ತಿದೆ. ಏಪ್ರಿಲ್ 14ರ ಅಂಬೇಡ್ಕರ್ ಜಯಂತಿ ದಿನ ಸಹ ರಜೆಯಿರುವುದರಿಂದ ಮಕ್ಕಳಿಗೆ ಅಂಬೇಡ್ಕರ್ ಅವರ ಬಗ್ಗೆ ಅರಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಏಪ್ರಿಲ್ 14ರಂದು ಅಂಬೇಡ್ಕರ್ ಜಯಂತಿ ಆಚರಿಸಿ ಶಾಲಾ-ಕಾಲೇಜಿಗೆ ರಜೆ ಘೋಷಿಸಬೇಕು’ ಎಂದು ಪ್ರಮುಖರಾದ ನಂದಕುಮಾರ ಜೋಗಲೇಕರ್, ಸುಭಾಷ ಮಂಡೂರು, ಚಂದ್ರಕಾoತ ರೇವಣಕರ, ರಾಜೇಶ ದೇಭಾಗ, ಸುಭಾಷ ಕಾನಡೆ ಒತ್ತಾಯಿಸಿದರು.
ಇನ್ನೂ `ಕಳೆದ ನಾಲ್ಕು ದಶಕಗಳಿಂದ ಹೋರಾಟ ನಡೆಸಿದರೂ ಶಿರಸಿಯ ಐದು ರಸ್ತೆ ವೃತ್ತಕ್ಕೆ ಅಂಬೇಡ್ಕರ್ ಅವರ ಹೆಸರು ನಾಮಕರಣವಾಗಿಲ್ಲ. ಅನೇಕ ಮನವಿ ಸಲ್ಲಿಸಿದರೂ ಅದಕ್ಕೆ ಉತ್ತರ ಬಂದಿಲ್ಲ. ಶೃದ್ಧಾನಂದಗಲ್ಲಿ ಹಾಗೂ ರಾಜೀವನಗರ ಮಧ್ಯದಲ್ಲಿರುವ ಐದು ರಸ್ತೆ ವೃತ್ತವನ್ನು ಅಂಬೇಡ್ಕರ್ ವೃತ್ತ ಎಂದು ಘೋಷಣೆ ಮಾಡಬೇಕು’ ಎಂದು ಅರ್ಜುನ ಮಿಂಠಿ, ಭುಜಂಗ ಬೋರಕರ, ಜೆ ಕೆ ಆನಂದ, ಕಾಶಿನಾಥ ಕಾನಡೆ ಆಗ್ರಹಿಸಿದರು.
`ತಮ್ಮ ಈ ಮೂರು ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು. ಆ ಮೂಲಕ ಬಿ ಆರ್ ಅಂಬೇಡ್ಕರ್ ಅವರಿಗೆ ಹೆಚ್ಚಿನ ಗೌರವ ಸಿಗುವಂತೆ ಮಾಡಬೇಕು’ ಎಂದು ಅಕ್ಷಯ ಮಡಗಾಂವಕಾರ್, ನವೀನ ಕಾನಡೆ, ಅಮಿತ ಜೋಗಳಕೆರ್, ರಾಜೇಂದ್ರ ಜೋಗಳೆಕರ್ ಆಗ್ರಹಿಸಿದರು. ಕಳೆದ 13 ವರ್ಷದ ಅವಧಿಯಲ್ಲಿ ಸಲ್ಲಿಸಿದ ಮನವಿ ಪತ್ರಗಳ ದಾಖಲೆಯನ್ನು ಸಹ ಈ ವೇಳೆ ಹಾಜರುಪಡಿಸಿದರು.





