ಸರ್ಕಾರಿ ಕಚೇರಿಯ ಮಹಿಳಾ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿದ ವಾಹನ ಚಾಲಕರೊಬ್ಬರು ಈ ಪ್ರಕರಣದ ಆಂತರಿಕ ವಿಚಾರಣೆ ವೇಳೆ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ರಂಪಾಟ ನಡೆಸಿದ್ದಾರೆ.
ಲಭ್ಯವಿರುವ ಮಾಹಿತಿಗಳ ಪ್ರಕಾರ, ಯಲ್ಲಾಪುರದ ಅರಣ್ಯ ಇಲಾಖೆ ವಸತಿಗೃಹದಲ್ಲಿ ವಾಸವಾಗಿರುವ ಎರಡು ಕುಟುಂಬಗಳ ನಡುವೆ ನಡೆದ ವೈಮನಸ್ಸು ಈ ಅವಾಂತರಕ್ಕೆ ಕಾರಣವಾಗಿದೆ. ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರನಾಗಿ ದುಡಿಯುತ್ತಿರುವ ಚಾಲಕ ಅನಂತ ಹಾಗೂ ಅದೇ ಇಲಾಖೆಯಲ್ಲಿ ಕೆಲಸ ಮಾಡುವ ಯಾಸ್ಮಿನಾ (ಇಬ್ಬರ ಹೆಸರು ಬದಲಿಸಿದೆ) ನಡುವೆ ಹೋಳಿ ಹಬ್ಬದ ಅವಧಿಯಲ್ಲಿ ಗಲಾಟೆ ನಡೆದಿತ್ತು. ವಾಹನ ಚಾಲಕ ಅನಂತ ಅವರು ಸರಾಯಿ ನಶೆಯಲ್ಲಿ ಯಾಸ್ಮೀನಾ ಅವರ ಜೊತೆ ಅನುಚಿತವಾಗಿ ವರ್ತಿಸಿದ್ದರು.
ಇದರೊಂದಿಗೆ ಕಚೇರಿ ಸಮಯದಲ್ಲಿ ಸಹ ಅನಂತ ಅವರು ಮಹಿಳಾ ನೌಕರರನ್ನು ಕಾಡಿಸುತ್ತಿದ್ದರು. ಇದರಿಂದ ಅಲ್ಲಿನ ಮಹಿಳೆಯರು ಸಹ ಅನಂತ ಅವರ ಉಪಟಳಕ್ಕೆ ಬೇಸತ್ತಿದ್ದರು. ತಮಗಾದ ಕೆಟ್ಟ ಅನುಭವಗಳ ಬಗ್ಗೆ ಯಾಸ್ಮೀನಾ ಅವರು ಇಲಾಖೆಗೆ ದೂರು ನೀಡಿದ್ದರು. ಇಲಾಖೆಯಲ್ಲಿ ಸ್ಥಾಪಿಸಲಾದ ದೂರು ಸಮಿತಿಯಿಂದ ಶನಿವಾರ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಶನಿವಾರ ಹಿರಿಯ ಮಹಿಳಾ ಅಧಿಕಾರಿಯೊಬ್ಬರು ಈ ದೂರಿನ ವಿಚಾರಣೆ ನಡೆಸಿದರು.
ವಿಚಾರಣೆ ವೇಳೆ ರೊಚ್ಚಿಗೆದ್ದ ಅನಂತ ಅವರು ತಮ್ಮ ಮುಂದಿದ್ದ ಯಾಸ್ಮೀನಾ ಅವರು ಮೇಲೆ ಪೆಟ್ರೋಲ್ ಸುರಿಯಲು ಮುಂದಾದರು. ಆಗ, ವಿಚಾರಣಾ ಅಧಿಕಾರಿ ಅಡ್ಡ ಬಂದರು. ಕೂಡಲೇ ಅನಂತ ಅವರು ತಮ್ಮ ಮೇಲೆಯೇ ತಾವು ಪೆಟ್ರೋಲ್ ಸುರಿದುಕೊಂಡು ರಂಪಾಟ ನಡೆಸಿದರು. ಈ ವಿಷಯ ಅರಿತು ಅನೇಕರು ಸ್ಥಳಕ್ಕೆ ಜಮಾಯಿಸಿದರು. ಆತ್ಮಹತ್ಯೆ ಪ್ರಯತ್ನ ಸಹ ಅಪರಾಧ ಆಗಿರುವುದರಿಂದ ಈ ಬಗ್ಗೆ ಇಲಾಖೆಯವರು ಪೊಲೀಸರಿಗೆ ವಿಷಯ ಮುಟ್ಟಿಸಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಭಾಯಿಸಿದರು.
ಘಟನಾವಳಿಗಳ ಬಗ್ಗೆ ಅರಣ್ಯ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅನ್ಯಾಯಕ್ಕೆ ಒಳಗಾದ ಮಹಿಳೆಯರು ಸಹ ಪೊಲೀಸ್ ದೂರು ನೀಡುವ ಸಾಧ್ಯತೆಗಳಿವೆ. `ಪೊಲೀಸ್ ದೂರು ನೀಡುವಂತೆ ಮಹಿಳೆಗೆ ಸೂಚಿಸಲಾಗಿದೆ. ಮುಂದಿನ ವಿಚಾರಣೆಯನ್ನು ಪೊಲೀಸರು ನೋಡಿಕೊಳ್ಳುತ್ತಾರೆ’ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.