ಸಾರ್ವಜನಿಕರ ವಿರೋಧದ ನಡುವೆಯೂ ಹೆದ್ದಾರಿ ಟೋಲ್ ಶುಲ್ಕ ಹೆಚ್ಚಳವಾಗಿದೆ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವವರು ಏಪ್ರಿಲ್ 1ರಿಂದ ಹೆಚ್ಚಿನ ಹಣ ನೀಡಿ ಸಂಚರಿಸುವುದು ಅನಿವಾರ್ಯವಾಗಿದೆ.
ಹೆದ್ದಾರಿ ನಿರ್ಮಾಣ ಹಾಗೂ ಅದರ ನಿರ್ವಹಣೆಯ ಹೊಣೆ ಹೊತ್ತ ಐಆರ್‌ಬಿ ಕಂಪನಿ ಟೋಲ್ ಶುಲ್ಕ ಪಡೆಯುತ್ತಿದೆ. ಹೆದ್ದಾರಿ ಕಾಮಗಾರಿ ಪೂರ್ಣವಾಗದೇ ಇದ್ದರೂ ಟೋಲ್ ಹಣ ಪಡೆಯುತ್ತಿರುವ ಬಗ್ಗೆ ಆಕ್ಷೇಪಗಳಿವೆ. ಆದರೆ, ಅದನ್ನು ಮೀರಿ ಇದೀಗ ಟೋಲ್ ಶುಲ್ಕ ಹೆಚ್ಚಳ ಮಾಡಲಾಗಿದೆ. ಇದಲ್ಲದೇ ಫಾಸ್ಟ್ ಟ್ಯಾಗ್ ಇಲ್ಲದ ವಾಹನಗಳಿಂದ ದುಪ್ಪಟ್ಟು ಹಣ ವಸೂಲಿಗೆ ಐಆರ್‌ಬಿ ಕಂಪನಿ ಸಿದ್ಧತೆ ಮಾಡಿಕೊಂಡಿದೆ.
ಪ್ರತಿ ವರ್ಷ ಮಾರ್ಚ ಅವಧಿಯಲ್ಲಿ ಹೆದ್ದಾರಿ ಪ್ರಯಾಣ ಶುಲ್ಕ ಪರಿಷ್ಕರಣೆ ನಡೆಯುತ್ತದೆ. 2025ರ ಏಪ್ರಿಲ್ 1ರಿಂದ ಲಘು ವಾಹನಗಳ ಟೋಲ್ ದರವನ್ನು 5 ರೂ ಏರಿಕೆ ಮಾಡಲಾಗಿದೆ. ಬಸ್ಸು, ಟ್ರಕ್ ಸೇರಿ ವಿವಿಧ ವಾಹನ ಪ್ರಯಾಣ ದರ 10ರೂಪಾಯಿಯಿಂದ 15ರೂಪಾಯಿಗೆ ಏರಿಕೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಚತುಷ್ಪಥ ಹೆದ್ದಾರಿ-66ರಲ್ಲಿ ಮೂರು ಟೋಲ್ ಪ್ಲಾಜಾಗಳಿದ್ದು, ಈ ಮಾರ್ಗವಾಗಿ ಸಂಚರಿಸುವ ಪ್ರಯಾಣಿಕರು ಪ್ರತಿಯೊಂದು ಕಡೆ ಹಣ ಕೊಡುವುದು ಅನಿವಾರ್ಯ. ಅಂಕೋಲಾ ತಾಲೂಕಿನ ಬೇಲೆಕೇರಿ ಮತ್ತು ಕುಮಟಾ ತಾಲೂಕಿನ ಹೊಳೆಗದ್ದೆ ಪ್ಲಾಜಾ ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಗೆ ಬರುತ್ತದೆ. ಉಡುಪಿ ಜಿಲ್ಲೆಯ ಶಿರೂರಿನಲ್ಲಿ ಇನ್ನೊಂದು ಟೋಲ್ ಪ್ಲಾಜಾ ಕಾರ್ಯ ನಿರ್ವಹಿಸುತ್ತಿದೆ.