ಮುಂದೆ ಚಲಿಸುತ್ತಿದ್ದ ಕಾರನ್ನು ಹಿಂದಿಕ್ಕುವ ತರಾತುರಿಯಲ್ಲಿ ಎರಡು ಬೈಕ್ ನಡುವೆ ಅಪಘಾತ ನಡೆದಿದೆ. ಏಕಾಏಕಿ ಕಾರಿನ ಬಲಬದಿಗೆ ಚಲಿಸಿದ ಬೈಕಿನ ಹ್ಯಾಂಡಲ್ ಇನ್ನೊಂದು ಬೈಕ್ ಸಹ ಸವಾರ ಬೆನ್ನಿಗೆ ಹಾಕಿಕೊಂಡಿದ್ದ ಬ್ಯಾಗಿಗೆ ಸಿಲುಕಿದ್ದರಿಂದ ಅಪಘಾತದ ತೀವೃತೆ ಹೆಚ್ಚಾಗಿದೆ.
ಮುಂಡಗೋಡು ಬೆಡಸಗಾವಿನ ಶಾನವಳ್ಳಿಯ ಗಿರೀಶ ಸಿದ್ದಿ (23) ಹಾಗೂ ಅವರ ಚಿಕ್ಕಪ್ಪನ ಮಗ ಕಿರಣ ಸಿದ್ದಿ (21) ಮಾರ್ಚ 28ರ ಸಂಜೆ ಶಿರಸಿಗೆ ಹೊರಟಿದ್ದರು. ಗೌಡಳ್ಳಿ ದಾಟಿ ಸೋಮನಳ್ಳಿ ಕ್ರಾಸ್ ಹತ್ತಿರದ ಕೆರೆಯ ಬಳಿ ಅವರ ಮುಂದೆ ಒಂದು ಬೈಕ್ ಹೋಗುತ್ತಿತ್ತು. ಆ ಬೈಕನ್ನು ಶಿರಸಿಯ ಇಳಸೂರು ಸಣ್ಣಕೇರಿಯ ಅಭಿಷೇಕ ನಾಯ್ಕ (21) ಓಡಿಸುತ್ತಿದ್ದರು. ಆ ಬೈಕಿನ ಮುಂದೆ ಒಂದು ಕಾರು ಚಲಿಸುತ್ತಿದ್ದು, ಆ ಕಾರನ್ನು ಹಿಂದಿಕ್ಕಲು ಈ ಎರಡೂ ಬೈಕಿನವರು ಒಟ್ಟಿಗೆ ಪ್ರಯತ್ನಿಸಿದರು.
ಮೊದಲು ಗಿರೀಶ ಸಿದ್ದಿ ರಸ್ತೆಯ ಬಲಭಾಗಕ್ಕೆ ಬೈಕ್ ಓಡಿಸಿದರು. ಅದರ ಬೆನ್ನಲ್ಲೆ ಅಭಿಷೇಕ ನಾಯ್ಕ ಸಹ ಬೈಕಿನ ರೇಸು ಜಾಸ್ತಿ ಮಾಡಿದರು. ಆಗ ಅಭಿಷೇಕ್ ನಾಯ್ಕ ಅವರು ಓಡಿಸುತ್ತಿದ್ದ ಬೈಕಿನ ಹ್ಯಾಂಡಲ್ ಗಿರೀಶ ಸಿದ್ದಿ ಅವರು ಓಡಿಸುತ್ತಿದ್ದ ಬೈಕಿನಲ್ಲಿದ್ದ ಕಿರಣ ಸಿದ್ದಿ ಅವರ ಬೆನ್ನಿಗೆ ಇದ್ದ ಬ್ಯಾಗಿಗೆ ತಾಕಿತು. ಜೊತೆಗೆ ಆ ಹ್ಯಾಂಡಲ್ ಅಲ್ಲಿಯೇ ಸಿಕ್ಕಿಬಿದ್ದಿದ್ದರಿಂದ ಅಭಿಷೇಕ್ ನಾಯ್ಕ ಅವರ ಬೈಕ್ ನಿಯಂತ್ರಣ ತಪ್ಪಿತು.
ಆಗ, ಎರಡು ಬೈಕಿನಲ್ಲಿದ್ದವರು ನೆಲಕ್ಕೆ ಬಿದ್ದರು. ಪರಿಣಮ ಕಿರಣ ಸಿದ್ದಿ ಅವರಿಗೆ ಎರಡು ಕೈ, ಸೊಂಟ ಬೆನ್ನಿಗೆ ಗಾಯವಾಯಿತು. ಗಿರೀಶ್ ಸಿದ್ದಿ ಅವರಿಗೂ ಅಲ್ಲಲ್ಲಿ ನೋವಾಯಿತು. ಈ ಅಪಘಾತದ ಪರಿಣಾಮ ಅಭಿಷೇಕ ನಾಯ್ಕ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡರು. ಈ ಎಲ್ಲಾ ವಿದ್ಯಮಾನಗಳ ಬಗ್ಗೆ ಕಿರಣ ಸಿದ್ದಿ ಶಿರಸಿ ಗ್ರಾಮೀಣ ಪೊಲೀಸರಿಗೆ ಮಾಹಿತಿ ನೀಡಿ ಪ್ರಕರಣ ದಾಖಲಿಸಿದರು.