ಯುಗಾದಿ- ಗುಡಿಪಡ್ವಾ ಅಂಗವಾಗಿ ನರೇಂದ್ರಾಚಾರ್ಯಜಿ ಮಹಾರಾಜ್ ಭಕ್ತ ಸೇವಾ ಮಂಡಳಿ ನೇತ್ರತ್ವದಲ್ಲಿ ಕಾರವಾರ ನಗರದಲ್ಲಿ ನಡೆದ ಭವ್ಯ ಶೋಭಾ ಯಾತ್ರೆ ನೋಡುಗರ ಮನ ಗೆದ್ದಿತು.
ಯುಗಾದಿಯ ಹೊಸ ವರ್ಷದ ಆರಂಭವನ್ನು ಮರಾಠ – ಕೊಂಕಣ ಸಮುದಾಯದವರು `ಗುಡಿಪಡ್ವಾ’ ಎಂಬ ಹೆಸರಿನಿಂದ ಆಚರಿಸುತ್ತಾರೆ. ಸನಾತನ ಹಿಂದು ಸಂಸ್ಕೃತಿಯ ವಿಶೇಷಗಳನ್ನು ಈ ವೇಳೆ ಸಮುದಾಯದವರು ಸಾರುತ್ತಾರೆ. ಭಾನುವಾರ ಹೊಸ ವರ್ಷವನ್ನು ಸಾಂಪ್ರದಾಯಿಕ ಹಾಗೂ ಶಾಸ್ತ್ರೋಕ್ತವಾಗಿ ಸ್ವಾಗತಿಸಲು ನರೇಂದ್ರಾಚಾರ್ಯಜಿ ಮಹಾರಾಜ್ ಭಕ್ತ ಸೇವಾ ಮಂಡಳಿಯವರು ಭವ್ಯ ಶೋಭಾ ಯಾತ್ರೆ ನಡೆಸಿದರು.
ಕೋಡಿಬಾಗ್ ದುರ್ಗಾದೇವಿ ದೇವಸ್ಥಾನ ಹೊರಟ ಶೋಭಾಯಾತ್ರೆ ನಂದನಗದ್ದಾ ಗಣಪತಿ ದೇವಸ್ಥಾನದವರೆಗೆ ಸಾಗಿತು. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಶೋಭಾಯಾತ್ರೆಯಲ್ಲಿ ಡೋಲು, ನಗಾರಿಗಳು ಸದ್ದು ಮಾಡಿದವು. ಛತ್ರಪತಿ ಶಿವಾಜಿ, ಸಂಭಾಜಿ ಮಹಾರಾಜರು, ರಾಮಾಯಣ ಸೇರಿದಂತೆ ವಿವಿಧ ರೂಪಕಗಳನ್ನು ಜನ ಕಣ್ತುಂಬಿಕೊoಡರು. ಮಹಿಳೆಯರು ಪೂರ್ಣಕುಂಭ ಹಾಗೂ ಗುಡಿ ಹಿಡಿದು ಮೆರವಣಿಗೆಯಲ್ಲಿ ಸಾಗಿದರು. ಮಕ್ಕಳು ವೃದ್ಧರು ಸಹ ನೂರಾರು ಸಂಖ್ಯೆಯಲ್ಲಿ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು.
ಕೋಡಿಬಾಗ್ ದುರ್ಗಾದೇವಿ ದೇವಸ್ಥಾನದ ಬಳಿ ಶೋಭಾಯಾತ್ರೆಗೆ ಚಾಲನೆ ನೀಡಿದ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ `ಧರ್ಮದ ಪರಿಪಾಲನೆ, ರಕ್ಷಣೆಯನ್ನು ನಾವೆಲ್ಲರೂ ಒಗ್ಗಟ್ಟಿನಿಂದ ಮಾಡಬೇಕು. ಎಲ್ಲಾ ಧರ್ಮವನ್ನು ಗೌರವಿಸಿ, ಮಾನವೀಯತೆಯ ಮೌಲ್ಯ ಸಾರಬೇಕು’ ಎಂದು ಕರೆ ನೀಡಿದರು. `ಹಿಂದು ಕ್ಯಾಲೆಂಡರ್ ಪ್ರಕಾರ ಚಾಂದ್ರಮಾನ ಯುಗಾದಿ ಹೊಸ ವರ್ಷದ ಆರಂಭ. ಪೃಕೃತಿಯಲ್ಲಿ ಸಹ ಬದಲಾವಣೆಯಾಗುವುದರಿಂದ ಇಡೀ ಜಗತ್ತಿಗೂ ಈ ದಿನ ಹೊಸ ವರ್ಷ’ ಎಂದವರು ಹೇಳಿದರು.
`ನರೇಂದ್ರಾಚಾರ್ಯಜಿ ಮಹಾರಾಜ್ ಅವರು ಉತ್ತರಕನ್ನಡ ಜಿಲ್ಲೆಯಲ್ಲಿ ಸಂಸ್ಕೃತಿ- ಸಂಪ್ರದಾಯಗಳನ್ನು ಬೆಳೆಸಿದ್ದಾರೆ. ಸಾಧು- ಸಂತರು, ಪೂರ್ವಜರು ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕು’ ಎಂದು ಕರೆ ನೀಡಿದರು. ಎಲ್ಲರಿಗೂ ಯುಗಾದಿ ಶುಭಾಶಯಕೋರಿದ ಅವರು ನಾಡಿನ ಎಲ್ಲರು ಸುಖ- ಶಾಂತಿ- ಸಮೃದ್ಧಿಯಿಂದ ಬಾಳಲಿ’ ಎಂದು ಬೇಡಿಕೊಂಡರು. ಭಕ್ತ ಮಂಡಳಿಯ ಪ್ರಮುಖರಾದ ಸೂರಜ್ ಕೆಂಕ್ರೆ, ದೀಪಕ್ ವೆರ್ಣೇಕರ್, ನಯನಬಾಬು ಕಾಣಕೋಣಕರ್, ಅಪ್ಪಣ ಕುಡ್ತಲ್ಕರ್, ಅರುಣ್ ರಾಣೆ, ಸುರೇಶ್ ಭಟ್, ಕಿರಣ್ ತಾಮ್ಸೆ, ಸಂತೋಷ್ ಮಾಳ್ಸೇಕರ ಇತರರು ಇದ್ದರು.
ಈ ಶೋಭಾಯಾತ್ರೆಯ ವಿಡಿಯೋ ಇಲ್ಲಿ ನೋಡಿ..