ಯೋಗ ಕಲಿಸುವುದಕ್ಕಾಗಿ ಗೋಕರ್ಣಕ್ಕೆ ಬಂದ ಯೋಗೇಂದ್ರ ಮಾದಕ ವ್ಯಸನ ಸೇವಿಸಿ ಸಿಕ್ಕಿ ಬಿದ್ದಿದ್ದಾರೆ. ಅಮಲು ಪದಾರ್ಥ ಸೇವಿಸಿ ಬೀದಿ ಬೀದಿ ಅಲೆಯುತ್ತಿದ್ದ ಯೋಗೇಂದ್ರ ಅವರಗೆ ಗೋಕರ್ಣ ಸಿಪಿಐ ಶ್ರೀಧರ್ ಎಸ್ ಆರ್ ಬಿಸಿ ಮುಟ್ಟಿಸಿದ್ದಾರೆ.
ಮಾರ್ಚ 29ರಂದು ಸಂಜೆ 7.30ರ ಆಸುಪಾಸಿಗೆ ಪೊಲೀಸರಿಗೆ ಒಂದು ಫೋನ್ ಬಂದಿತು. ಉದ್ದವಾದ ಕೂದಲು ಬಿಟ್ಟ ವ್ಯಕ್ತಿಯೊಬ್ಬ ಗೋಕರ್ಣದ ಓಂ ಕಡಲತೀರದ ಬಳಿ ಸಾರ್ವಜನಿಕರ ಜೊತೆ ಅನುಚಿತವಾಗಿ ವರ್ತಿಸುತ್ತಿರುವ ಬಗ್ಗೆ ದೂರಲಾಗಿತ್ತು. ಪೊಲೀಸರು ತಕ್ಷಣ ಅಲ್ಲಿಗೆ ತೆರಳಿದರು.
31 ವರ್ಷದ ಯೋಗೇಂದ್ರ ಅಶೋಕ್ ಕುಮಾರ್ ಬಾಗ್ರಿ ಎಂಬಾತರು ಓಂ ಬೀಚ್ ಮೆಟ್ಟಿಲ ಮೇಲೆ ಮಲಗಿದ್ದರು. ಯೋಗೇಂದ್ರ ಅವರಿಗೆ ಆ ವೇಳೆ ಪೊಲೀಸರು ಮಾತನಾಡಿಸಿದರೂ ಮಾತನಾಡುವಷ್ಟು ಪ್ರಜ್ಞೆ ಇರಲಿಲ್ಲ. ಸಾಕಷ್ಟು ಪ್ರಯತ್ನದ ನಂತರ ಯೋಗೇಂದ್ರರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ಪೊಲೀಸರು ಸ್ವಯಂ ಒಪ್ಪಿಗೆಪಡೆದರು. ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಯನ್ನು ನಡೆಸಿದರು.
ತಪಾಸಣೆ ನಡೆಸಿದ ವೈದ್ಯರು ಯೋಗೇಂದ್ರ ಅಪಾರ ಪ್ರಮಾಣದಲ್ಲಿ ಗಾಂಜಾ ಸೇವಿಸಿದ ಬಗ್ಗೆ ವರದಿ ನೀಡಿದರು. ಯೋಗ ಸಾಧನೆ ಹಾಗೂ ಯೋಗ ಪ್ರಚಾರಕ್ಕಾಗಿ ದೆಹಲಿಯಿಂದ ಗೋಕರ್ಣಕ್ಕೆ ಬಂದಿದ್ದ ಯೋಗೇಂದ್ರ ದಾರಿ ತಪ್ಪಿರುವ ಬಗ್ಗೆ ಎಲ್ಲರೂ ಹುಬ್ಬೇರಿಸಿದರು. ನಿಷೇಧಿತ ಮಾದಕ ವ್ಯಸನ ಸೇವಿಸಿದ ಕಾರಣ ಪೊಲೀಸರು ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದರು.