ಯಲ್ಲಾಪುರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸುನೀಲ ಗಾವಡೆ ಅವರನ್ನು ಸರ್ಕಾರ ಇಲ್ಲಿಂದ ವರ್ಗಾಯಿಸಿದೆ. ಸಾಕಷ್ಟು ಸಾರ್ವಜನಿಕ ದೂರುಗಳ ಹಿನ್ನಲೆ ಅವರನ್ನು ಕಾರವಾರಕ್ಕೆ ವರ್ಗಾವಣೆ ಮಾಡಲಾಗಿದೆ.
ಎಲ್ಲರ ಜೊತೆ ಸೌಜನ್ಯವಾಗಿ ವರ್ತಿಸುವ ಸುನೀಲ ಗಾವಡೆ ಸಾರ್ವಜನಿಕ ಕೆಲಸವನ್ನು ಮಾತ್ರ ಮಾಡಿಕೊಡುತ್ತಿರಲಿಲ್ಲ. ಸಮಸ್ಯೆ ಹೇಳಿಕೊಂಡು ಬಂದವರನ್ನು ಸಮಾಧಾನ ಮಾಡಿ ಕಳುಹಿಸುವಲ್ಲಿ ಅವರು ಸಾಕಷ್ಟು ನೈಪುಣ್ಯತೆ ಪಡೆದಿದ್ದರು. ಆದರೆ, ಮೂಲ ಸಮಸ್ಯೆ ಮಾತ್ರ ಎಂದಿಗೂ ಬಗೆಹರಿಯುತ್ತಿರಲಿಲ್ಲ. ಸುನೀಲ ಗಾವಡೆ ಸದಾ ಅತ್ಯಂತ ತಾಳ್ಮೆಯಿಂದ ವರ್ತಿಸುತ್ತಿದ್ದರು. ಜನ ಬೈದರು ಅದನ್ನು ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದರು. ಎಂದಿಗೂ ಅವರು ಸಾರ್ವಜನಿಕರನ್ನು ನಿಂದಿಸಿದ ಉದಾಹರಣೆಗಳಿಲ್ಲ. ಕುಡಿಯುವ ನೀರು, ಒಳಚರಂಡಿ, ಬೀದಿ ಬೀದಿ ಮೀನು ಮಾರಾಟ, ತ್ಯಾಜ್ಯ ನಿರ್ವಹಣೆ ಸೇರಿ ಯಾವ ಸಮಸ್ಯೆ ಬಂದರೂ ಅದನ್ನು ಶಾಂತವಾಗಿ ಆಲಿಸುತ್ತಿದ್ದರು. ಆದರೆ, ಯಾವ ಕ್ರಮವನ್ನು ಸಹ ಸರಿಯಾಗಿ ಕೈಗೊಳ್ಳುತ್ತಿರಲಿಲ್ಲ.`ಕೆಲಸ ಮಾಡಿಕೊಡುವುದಿಲ್ಲ’ ಎಂಬುದು ಅವರ ಮೇಲಿದ್ದ ಬಹುದೊಡ್ಡ ಆರೋಪವಾಗಿದ್ದು, ಅದನ್ನು ಸರಿಪಡಿಸಲು ಪ ಪಂ ಅಧ್ಯಕ್ಷರಿಂದ ಸಹ ಸಾಧ್ಯವಾಗಿರಲಿಲ್ಲ.
ಸುನೀಲ ಗಾವಡೆ ಅವರ ಅವಧಿಯಲ್ಲಿ ಯಲ್ಲಾಪುರ ಪಟ್ಟಣ ಪಂಚಾಯತ ಆಡಳಿತ ವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಜನ ಆಕ್ರೋಶವ್ಯಕ್ತಪಡಿಸಿದ್ದರು. ಕಡತ ಕಳ್ಳತನ, ಅಕ್ರಮ-ಅವ್ಯವಹಾರಗಳ ದೂರುಗಳಿಗೆ ಲೆಕ್ಕವೇ ಇರಲಿಲ್ಲ. ಪಟ್ಟಣ ಪಂಚಾಯತ ಸದಸ್ಯರು ಸಹ ಸುನೀಲ ಗಾವಡೆ ವಿರುದ್ಧ ತಿರುಗಿ ಬಿದ್ದಿದ್ದರು. ಎರಡು ವರ್ಷಗಳಿಂದ ಜಾತ್ರೆ ಲೆಕ್ಕಾಚಾರ ನೀಡುವಂತೆ ಪೀಡಿಸಿದರೂ ಪ ಪಂ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿ ಅದನ್ನು ನೀಡಿರಲಿಲ್ಲ. ಕೊನೆಗೆ ಲೆಕ್ಕ ನೀಡಿದಾಗ 11 ಲಕ್ಷಕ್ಕೂ ಅಧಿಕ ಹಣ ಅಪರಾತಪರ ನಡೆದಿರುವುದು ಬೆಳಕಿಗೆ ಬಂದಿತ್ತು. `ಅಕ್ರಮವನ್ನು ತನಿಖೆಗೆ ಒಳಪಡಿಸುವೆ’ ಎಂದು ಭರವಸೆ ನೀಡಿ ಪ ಪಂ ಸದಸ್ಯರನ್ನು ಸುನೀಲ ಗಾವಡೆ ಸುಮ್ಮನಾಗಿಸಿದ್ದರು. ಆದರೆ, ಅಕ್ರಮದ ಬಗ್ಗೆ ಯಾವ ತನಿಖೆಯೂ ಪ್ರಗತಿ ಕಾಣಲಿಲ್ಲ. ಅಕ್ರಮದ ಬಗ್ಗೆ ತನಿಖೆಗಾಗಿ ಅವರು ಠರಾವು ಮಂಡಿಸಬೇಕಿದ್ದು, ಅದನ್ನು ಜಿಲ್ಲಾಡಳಿತದ ಕಚೇರಿಗೆ ರವಾನಿಸಿದ ದಾಖಲೆಯನ್ನು ಮುಂದಿನ ಸಭೆಯ ಮುಂದಿಡಬೇಕಿತ್ತು. ಆದರೆ, ಆ ಕೆಲಸ ಆಗಲಿಲ್ಲ.
ಸುನೀಲ ಗಾವಡೆ ವಿರುದ್ಧ ಸಾರ್ವಜನಿಕ ದೂರು ಹೆಚ್ಚಳವಾದ ಕಾರಣ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿತು. ಮಾರ್ಚ 29ರಂದು ಅವರನ್ನು ಕಾರವಾರ ನಗರಸಭೆಯ ಆರೋಗ್ಯ ನಿರೀಕ್ಷಕ ಹುದ್ದೆಗೆ ವರ್ಗಾಯಿಸಿ ಆದೇಶ ಹೊರಡಿಸಿತು. ಯಲ್ಲಾಪುರ ಪಟ್ಟಣ ಪಂಚಾಯತಗೆ ಮುಂಡಗೋಡು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಚಂದ್ರಶೇಖರ ಬಿ ಅವರನ್ನು ಪ್ರಭಾರಿಯನ್ನಾಗಿಸಿ ಪೌರಾಡಳಿತ ನಿರ್ದೇಶನಾಲಯ ಆದೇಶ ಹೊರಡಿಸಿತು.