`ಹುಲ್ಲು, ಹಿಂಡಿ, ಹತ್ತಿಕಾಳು ಸೇರಿ ಹಲವು ವಸ್ತುಗಳ ಬೆಲೆ ಏರಿಕೆಯಾಗಿದ್ದರಿಂದ ಸರ್ಕಾರ ಹಾಲಿನ ದರವನ್ನು ಏರಿಸಿದೆ. ರೈತರು ಇದನ್ನು ವಿರೋಧಿಸುವ ಬದಲು ಸ್ವಾಗತಿಸಬೇಕು’ ಎಂದು ಹಾಲು ಉತ್ಪಾದಕರು ಆಗಿರುವ ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಕೆ ಭಟ್ಟ ಮೆಣಸುಪಾಲ್ ಹೇಳಿದ್ದಾರೆ.
`ಹಾಲು ಉತ್ಪಾದನೆಯ ಶ್ರಮ ಅರಿಯದವರು ಮಾತ್ರ ದರ ಏರಿಕೆಯನ್ನು ವಿರೋಧಿಸುತ್ತಾರೆ. ಹಾಲು ಉತ್ಪಾದನೆಯ ಬಗ್ಗೆ ಅರಿವು ಇದ್ದವರು ಅದನ್ನು ಸ್ವಾಗತಿಸುತ್ತಾರೆ’ ಎಂದು ಅವರು ಹೇಳಿದ್ದಾರೆ. ಜೊತೆಗೆ `ಹಾಲಿನ ದರ ಏರಿಕೆಯ ಪ್ರಯೋಜನ ಹಾಲು ಉತ್ಪಾದಕರಿಗೆ ಸಿಗಲಿದೆ. ಹಾಲಿನ ಹೆಚ್ಚುವರಿ ಹಣವನ್ನು ರೈತರಿಗೆ ಕೊಡುವುದಾಗಿ ಸರ್ಕಾರವೂ ಹೇಳಿಕೊಂಡಿದ್ದು, ಇದರಿಂದ ಹಾಲು ಉತ್ಪಾದಕರಿಗೆ ಅನುಕೂಲವಾಗಲಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
`ಹಾಲು ಉತ್ಪಾದನೆ, ಸಾಗಾಟ, ಕೂಲಿ, ಜಾನುವಾರುಗಳ ಮೇವು, ಔಷಧ ಎಲ್ಲಾ ಬೆಲೆಯೂ ಏರಿಕೆಯಾಗಿದೆ. ಕಡಿಮೆ ಬೆಲೆಯಲ್ಲಿ ಹಾಲು ಮಾರಾಟ ಮಾಡುವುದರಿಂದ ಜಾನುವಾರು ಸಾಕಾಣಿಕೆಯೇ ಹೈನುಗಾರರಿಗೆ ಹೊರೆಯಾಗಿದೆ’ ಎಂದವರು ಹೇಳಿದ್ದಾರೆ.
`ಹೈನುಗಾರಿಕೆ ನಡೆಸಿ ಜೀವನ ನಡೆಸುವುದು ಕಷ್ಟ ಎಂಬ ಪರಿಸ್ಥಿತಿಯಲ್ಲಿ ಸರ್ಕಾರ ಹಾಲಿನ ದರ ಏರಿಸಿ, ಅದರ ಪ್ರಯೋಜನ ರೈತರಿಗೆ ಸಿಗುವಂತೆ ಮಾಡಿದೆ’ ಎಂದು ಸರ್ಕಾರದ ನಿಲುವನ್ನು ಎನ್ ಕೆ ಭಟ್ಟ ಮೆಣಸುಪಾಲ್ ಸಮರ್ಥಿಸಿಕೊಂಡಿದ್ದಾರೆ. `ಹಾಲಿನ ದರ ಹೆಚ್ಚಾಯಿತು ಎಂದು ಬೊಬ್ಬೆ ಹಾಕುವರು ರೈತ ವಿರೋಧಿಗಳು ಎಂದು ಎನ್ ಕೆ ಭಟ್ಟ ಮೆಣಸುಪಾಲ್ ದೂರಿದ್ದಾರೆ.