ದಾಂಡೇಲಿ ಇಐಎಸ್ ಆಸ್ಪತ್ರೆ ಬಳಿ ಕೋತಿಗಳ ಕಾಟ ಹೆಚ್ಚಾಗಿದೆ. ಆಸ್ಪತ್ರೆ ಆವರಣದಲ್ಲಿದ್ದ ಕಾರ್ಮಿಕರೊಬ್ಬರ ಮೇಲೆ ಭಾನುವಾರ ಕೋತಿ ದಾಳಿ ನಡೆಸಿದೆ. ಕೋತಿ ಕಚ್ಚಿದ್ದರಿಂದ ಕಾಲಿಗೆ ಗಾಯ ಮಾಡಿಕೊಂಡ ಪ್ರವೀಣ ವಾಸಂದರ್ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ದಾಂಡೇಲಿ ನಗರದ ಇಎಸ್‌ಐ ಆಸ್ಪತ್ರೆಯ ಆವರಣದಲ್ಲಿ ಕಪ್ಪು ಮೂತಿ ಕೋತಿಯ ಸಂಖ್ಯೆ ಹೆಚ್ಚಿದೆ. ಆಸ್ಪತ್ರೆಗೆ ಬರುವ ರೋಗಿಗಳನ್ನು ಈ ಕೋತಿಗಳು ಕಾಡಿಸುತ್ತಿವೆ. ಆಸ್ಪತ್ರೆ ಆವರಣದಲ್ಲಿ ಕೆಲಸ ಮಾಡುತ್ತಿದ್ದ ಪ್ರವೀಣ ವಾಸಂದರ್ ಅವರ ಮೇಲೆಯೂ ಕೋತಿಯೊಂದು ಏಕಾಏಕಿ ದಾಳಿ ನಡೆಸಿದೆ.
ಆಸ್ಪತ್ರೆ ಆವರಣದಲ್ಲಿ ಪ್ರವೀಣ ಅವರು ಕಾಂಕ್ರೀಟ್ ಕೆಲಸ ಮಾಡುತ್ತಿದ್ದರು. ಸಂಜೆ ಕೆಲಸ ಮುಗಿಸಿ ಮನೆಗೆ ಹೋಗುವ ತಯಾರಿ ನಡೆಸಿದ್ದರು. ಆ ವೇಳೆ ಅಲ್ಲಿದ್ದ ಕೋತಿ ಅವರ ಕಾಲಿಗೆ ಕಚ್ಚಿತು. ಪ್ರವೀಣ ಅವರ ಕೂಗಾಟ ಕೇಳಿದ ಇತರೆ ಕಾರ್ಮಿಕರು ಕೋತಿಯನ್ನು ಓಡಿಸಿದರು. ಅದಾದ ನಂತರ ಪ್ರವೀಣ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಕೋತಿ ಕಡಿದ ಜಾಗಕ್ಕೆ ವೈದ್ಯರು 12 ಹೊಲಿಗೆ ಹಾಕಿದ್ದಾರೆ.
ಪ್ರವೀಣ ಅವರು ಗಾಯದಿಂದ ಸಂಪೂರ್ಣವಾಗಿ ವಾಸಿಯಾಗಲು 2 ತಿಂಗಳ ಸಮಯ ಬೇಕು ಎಂಬುದು ವೈದ್ಯರ ಮಾತು. ನಿತ್ಯವೂ ದುಡಿದು ತಿನ್ನುವ ಅವರಿಗೆ ಇದೀಗ ಕೆಲಸ ಇಲ್ಲ. ಹೀಗಾಗಿ `ಅರಣ್ಯ ಇಲಾಖೆ ಪ್ರವೀಣ ಅವರಿಗೆ ಪರಿಹಾರ ನೀಡಬೇಕು. ಜೊತೆಗೆ ಅಪಾಯಕಾರಿಯಾದ ಕೋತಿಗಳನ್ನು ಸ್ಥಳಾಂತರಿಸಬೇಕು’ ಎಂದು ಅಲ್ಲಿನವರು ಆಗ್ರಹಿಸಿದ್ದಾರೆ.