ಹೊನ್ನಾವರದ ಕಾಂಡ್ಲಾವನ ವೀಕ್ಷಣೆಗೆ ಪ್ರವಾಸಿಗರನ್ನು ಕರೆದಂತೆ ಚಾಲಕರೊಬ್ಬರಿಗೆ ಅಲ್ಲಿ ಬೋಟು ನಡೆಸುವ ಏಳೆಂಟು ಜನ ಸೇರಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. `ಕಾರಿನಲ್ಲಿ ಬಂದ ಪ್ರವಾಸಿಗರು ತಮ್ಮ ಬೋಟಿಗೆ ಬರಲಿಲ್ಲ’ ಎಂಬುದೇ ಈ ಘರ್ಷಣೆಗೆ ಕಾರಣ!
ಕುಮಟಾ ಗಂಗಾವಳಿಯ ಮುಜಾಮಿಲ್ ಸಾಬ್ ಅವರು ಕಾರು ಚಾಲಕರಾಗಿ ಜೀವನ ನಡೆಸುತ್ತಿದ್ದಾರೆ. ಮಾರ್ಚ 30ರಂದು ಅವರು ಮುರುಡೇಶ್ವರಕ್ಕೆ ಬಂದಿದ್ದ ಪ್ರವಾಸಿಗರನ್ನು ಹೊನ್ನಾವರಕ್ಕೆ ಕರೆತಂದಿದ್ದರು. ಅಲ್ಲಿನ ಕಾಂಡ್ಲಾವನ ವೀಕ್ಷಣೆಗೆ ಹೋದ ಪ್ರವಾಸಿಗರು ಬೋಟ್ ಮೂಲಕ ಸಂಚಾರ ನಡೆಸಿದ್ದರು. ಇದನ್ನು ಸಹಿಸದ ಇತರೆ ಬೋಟ್ ಮಾಲಕರು ಆ ಪ್ರವಾಸಿಗರನ್ನು ಕರೆತಂದ ಚಾಲಕರನ್ನು ಥಳಿಸಿದರು.
ಹೊನ್ನಾವರ ಕಾಸರಕೋಡಿನ ಗೋಪಾಲ ಗೌಡ ಹಾಗೂ ಕಾಸರಕೋಡು ದೇವಸ್ಥಾನಕೇರಿಯ ನಾರಾಯಣ ಗೌಡ ಜೊತೆ ಇನ್ನೂ ಕೆಲವರು ಸೇರಿ ಹೊಡೆದ ಬಗ್ಗೆ ಚಾಲಕ ಮುಜಾಮಿಲ್ ಸಾಬ್ ಪೊಲೀಸ್ ದೂರು ನೀಡಿದ್ದಾರೆ. `ಕೈ ಮಾಡಿದರೂ ಕಾರು ನಿಲ್ಲಿಸಿಲ್ಲ. ಜೊತೆಗೆ ತಮ್ಮ ಬೋಟಿಗೆ ಪ್ರವಾಸಿಗರನ್ನು ಕಳುಹಿಸಲಿಲ್ಲ’ ಎಂಬ ಕಾರಣದಿಂದ ಹೊಡೆದ ಬಗ್ಗೆ ಆರೋಪಿಸಿದ್ದಾರೆ.
ಚಾಲಕ ಮುಜಾಮಿಲ್ ಸಾಬ್ ಅವರು ಕರ್ಕಿಯಲ್ಲಿರುವ ಮಾವನ ಮಗ ಯುನಿಸ್ ಭಾಷಾಗೆ ಫೋನ್ ಮಾಡಿದ್ದು, ಅಲ್ಲಿ ಆಗಮಿಸಿದ ಯುನಿಸ್ ಭಾಷಾ ಮೇಲೆಯೂ ಬೋಟಿನವರು ಹಲ್ಲೆ ಮಾಡಿದ್ದಾರೆ. `ಟೂರಿಸ್ಟರನ್ನು ಯಾರ ಬೋಟಿನ ಮೇಲೆ ಕಳುಹಿಸಿದ್ದೀಯಾ? ಹೇಳು’ ಎಂದು ಮುಖಕ್ಕೆ ಹೊಡೆದು ಗಾಯಗೊಳಸಿದ್ದಾರೆ. ಅದಾದ ನಂತರ ಕಾಲಿನಿಂದ ಒತ್ತು ನೋವು ಮಾಡಿದ್ದಾರೆ. ಈ ಹೊಡೆದಾಟ ತಪ್ಪಿಸಲು ಬಂದ ಗಂಗಾವಳಿಯ ಚಾಲಕ ಸುಬ್ರಹ್ಮಣ್ಯ ನಾಯ್ಕ ಅವರಿಗೂ ಪೆಟ್ಟಾಗಿದೆ.
ಹೊನ್ನಾವರ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದ ಮುಜಾಮಿಲ್ ಸಾಬ್ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಹೊನ್ನಾವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.