ಯಲ್ಲಾಪುರ ಪಟ್ಟಣದಲ್ಲಿ ಅಳವಡಿಸಿದ್ದ ಕೆಲ ವಿದ್ಯಾಸಂಸ್ಥೆಯ ಫ್ಲೆಕ್ಸು-ಬ್ಯಾನರುಗಳನ್ನು ಎರಡು ದಿನದ ಹಿಂದೆ ಪಟ್ಟಣ ಪಂಚಾಯತ ತೆರವು ಮಾಡಿದೆ. ತ್ಯಾಜ್ಯ ತುಂಬುವ ತೆರೆದ ವಾಹನದಲ್ಲಿ ವಿದ್ಯಾರ್ಥಿನಿಯರ ಭಾವಚಿತ್ರವಿರುವ ಫ್ಲೆಕ್ಸುಗಳ ಮೆರವಣಿಗೆ ನಡೆಸಲಾಗಿದೆ. ಅದಾಗಿಯೂ, ವಿದ್ಯಾಸಂಸ್ಥೆಯವರು ಇದನ್ನು ಆಕ್ಷೇಪಿಸಿಲ್ಲ. ಕಾರಣ, ಫ್ಲೆಕ್ಸು ಅಳವಡಿಕೆಗೆ ಅವರ ಬಳಿ ಅನುಮತಿ ಪತ್ರವೇ ಇರಲಿಲ್ಲ!
ಸಾಧ್ಯವಾದಷ್ಟು ಪುಕ್ಕಟ್ಟೆಯಾಗಿಯೇ ಪ್ರಚಾರಪಡೆಯಲು ಬಯಸುವ ಅನೇಕರು ಫ್ಲೆಕ್ಸು-ಬ್ಯಾನರ್ ಅಳವಡಿಕೆಗೆ ಶುಲ್ಕ ಪಾವತಿಸುತ್ತಿಲ್ಲ. ಅಗತ್ಯ ಅನುಮತಿಯನ್ನು ಪಡೆಯುತ್ತಿಲ್ಲ. `ಇಲ್ಲಿ ತಮ್ಮನ್ನು ಯಾರೂ ಕೇಳುವವರಿಲ್ಲ’ ಎಂದು ಭಾವಿಸಿ ಅಪಾಯಕಾರಿ ವಿದ್ಯುತ್ ಕಂಬವನ್ನು ಬಿಡದೇ ಫ್ಲೆಕ್ಸು-ಬ್ಯಾನರ್ ಅಳವಡಿಸುತ್ತಿದ್ದಾರೆ. ಇದರಿಂದ ಸ್ಥಳೀಯ ಆಡಳಿತಕ್ಕೆ ಬರಬೇಕಿದ್ದ ಆದಾಯ ಕೈ ತಪ್ಪಿದೆ. ಜೊತೆಗೆ ಎಲ್ಲೆಂದರಲ್ಲಿ ಅನಧಿಕೃತವಾಗಿ ಫ್ಲೆಕ್ಸು-ಬ್ಯಾನರ್ ಅಳವಡಿಸುತ್ತಿರುವುದರಿಂದ ಪಟ್ಟಣದ ಸೌಂದರ್ಯವೂ ಹಾಳಾಗಿದೆ. ಅಪಘಾತ ಸೇರಿ ವಿವಿಧ ಅವಘಡಗಳಿಗೂ ಫ್ಲೆಕ್ಸು-ಬ್ಯಾನರ್ ಕಾರಣವಾಗುತ್ತಿದೆ. ಇದೆಲ್ಲದರ ಬಗ್ಗೆ ಅರಿವಿದ್ದರೂ ಅಡ್ಡದಾರಿ ಹಿಡಿದು ಪ್ರಚಾರಪಡೆಯುವವರ ಸಂಖ್ಯೆ ಕಡಿಮೆ ಆಗಿಲ್ಲ. ರಾಜಕೀಯ ಪಕ್ಷ ಹಾಗೂ ಘಟಾನುಘಟಿ ದುರಿಣರೂ ಸಹ ಅನಧಿಕೃತ ಫ್ಲೆಕ್ಸು-ಬ್ಯಾನರಿನ ಪ್ರಚಾರ ವಿಷಯದಲ್ಲಿ ಹಿಂದೆ ಬಿದ್ದಿಲ್ಲ.
ಯಲ್ಲಾಪುರ ಪಟ್ಟಣದ ಹುಬ್ಬಳ್ಳಿ-ಅಂಕೋಲಾ ರಸ್ತೆಯಲ್ಲಿ ಹುಬ್ಬಳ್ಳಿಯ ಅವಂತಿ ವಿದ್ಯಾಸಂಸ್ಥೆಯವರು ತಮ್ಮ ದೊಡ್ದದಾದ ಫ್ಲೆಕ್ಸು ಅಳವಡಿಸಿದ್ದರು. ಬಸ್ ನಿಲ್ದಾಣ ಬಳಿ ವಿಶ್ವದರ್ಶನ ವಿದ್ಯಾಲಯದವರು ಎತ್ತರದ ಜಾಗದಲ್ಲಿ ತಮ್ಮ ಫ್ಲೆಕ್ಸು ಅಳವಡಿಸಿದ್ದರು. ಪಟ್ಟಣ ಪಂಚಾಯತದ ಪೌರ ಕಾರ್ಮಿಕರು ತ್ಯಾಜ್ಯ ತುಂಬುವ ವಾಹನದಲ್ಲಿ ಆ ಎರಡು ಫ್ಲೆಕ್ಸುಗಳನ್ನು ತುಂಬಿಕೊoಡು ಪಟ್ಟಣ ಸಂಚಾರ ಮಾಡಿದರು. ಕಾಲೇಜು ಕಲಿಕೆಗಾಗಿ ಆಗಮಿಸಿದ್ದ ವಿದ್ಯಾರ್ಥಿನಿಯರ ಭಾವಚಿತ್ರಗಳು ತ್ಯಾಜ್ಯ ತುಂಬಿದ ವಾಹನ ಏರಿದ ಬಗ್ಗೆ ಅನೇಕರು ಮರುಕವ್ಯಕ್ತಪಡಿಸಿದರು. `ಇನ್ಮುಂದೆ ಅನುಮತಿಪಡೆದು ಪ್ಲೆಕ್ಸು ಅಳವಡಿಸಲಾಗುವುದು’ ಎಂದು ವಿಶ್ವದರ್ಶನ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ತಿಳಿಸಿದರು. `ಎಜನ್ಸಿ ಮೂಲಕ ಫ್ಲೆಕ್ಸ ಅಳವಡಿಸಲಾಗಿದ್ದು, ಅನುಮತಿ ಬಗ್ಗೆ ವಿಚಾರಿಸುವೆ’ ಎಂದು ಅವಂತಿ ಕಾಲೇಜಿನ ಪ್ರಾಚಾರ್ಯ ಪ್ರದೀಪ ಪ್ರತಿಕ್ರಿಯಿಸಿದರು.
ಪ್ಲಾಸ್ಟಿಕ್ ಬ್ಯಾನರ್ ಹಾವಳಿ:
ಪಟ್ಟಣದಲ್ಲಿ ಎಲ್ಲಾ ಕಡೆ ಇದೀಗ ನಿಷೇಧಿತ ಪ್ಲಾಸ್ಟಿಕ್ ಬ್ಯಾನರ್ ಹಾವಳಿ ಹೆಚ್ಚಾಗಿದೆ. ತೆರವು ಕಾರ್ಯಾಚರಣೆ ನಡೆಸುವ ಪಟ್ಟಣ ಪಂಚಾಯತದವರು ಎಲ್ಲರಿಗೂ ಒಂದೇ ನ್ಯಾಯ ಕಾಪಾಡುತ್ತಿಲ್ಲ. ಪ್ಲಾಸ್ಟಿಕ್ ಫ್ಲೆಕ್ಸು ಬ್ಯಾನರ್’ಗಳಿಂದ ಪರಿಸರ ಮಾಲಿನ್ಯದ ಬಗ್ಗೆ ಅರಿವಿದ್ದರೂ ಅಧಿಕಾರಿಗಳು ಮೌನವಾಗಿದ್ದಾರೆ. ಪ್ಲಾಸ್ಟಿಕ್ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ, ದಂಡ ವಿಧಿಸುವ ಸ್ಥಳೀಯ ಆಡಳಿತ ಪ್ಲಾಸ್ಟಿಕ್ ಕಟೌಟ್ ಹಾಕಿದವರಿಗೆ ದಂಡ ವಿಧಿಸಿದ ಉದಾಹರಣೆಗಳಿಲ್ಲ. ಕೆಲವು ಬ್ಯಾನರ್ ಮಾತ್ರ ತೆರವು ಮಾಡಿ, ಉಳಿದ ಬ್ಯಾನರ್’ನ್ನು ಹಾಗೇ ಬಿಡುತ್ತಿದ್ದಾರೆ. ಇನ್ನೂ ಪಟ್ಟಣದಲ್ಲಿ ಅಳವಡಿಸಲಾದ ವಿದ್ಯುತ್ ದೀಪದ ಕಂಬ, ಎಪಿಎಂಸಿ ಆವರಣದ ಗೋಡೆಗಳು, ವಿವಿಧ ಸರ್ಕಾರಿ ಕಚೇರಿ ಸೇರಿ ಎಲ್ಲೆಂದರಲ್ಲಿ ಹಾದಿ ಬೀದಿ ಜ್ಯೋತಿಷಿಗಳ ಪ್ರಚಾರ ನಡೆಯುತ್ತಿದೆ. ಪಟ್ಟಣ ಪಂಚಾಯತ ಕಚೇರಿ ಕಟ್ಟಡ ಸಹ ಅನಧಿಕೃತ ಜಾಹೀರಾತುಗಳಿಂದ ಹೊರತಾಗಿಲ್ಲ.
ಲೆಕ್ಕದಲ್ಲಿಯೂ ಅಪರಾತಪರ:
ಯಲ್ಲಾಪುರ ಜಾತ್ರೆಯಲ್ಲಿ 400ಕ್ಕೂ ಅಧಿಕ ಬ್ಯಾನರ್ ಅಳವಡಿಸಲಾಗಿತ್ತು. ಆ ವೇಳೆ 86 ಸಾವಿರ ರೂ ಮಾತ್ರ ಸ್ಥಳೀಯ ಆಡಳಿತಕ್ಕೆ ಜಮಾ ಆಗಿತ್ತು. ಅನೇಕರು ಬ್ಯಾನರ್ ಅಳವಡಿಕೆಯ ಹಣವನ್ನು ಪಟ್ಟಣ ಪಂಚಾಯತಗೆ ಪಾವತಿಸಿರಲಿಲ್ಲ. ಈ ಬಗ್ಗೆ ಈಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ಸಹ ಚರ್ಚೆ ನಡೆದಿದ್ದು, `ಇನ್ನು ಮುಂದೆ ಹಾಗಾಗದಂತೆ ಎಚ್ಚರಿಕೆವಹಿಸಲಾಗುತ್ತದೆ’ ಎಂದು ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಅದಾಗಿ ತಿಂಗಳು ಕಳೆಯುವ ಮುನ್ನವೇ ಅನಧಿಕೃತ ಫ್ಲೆಕ್ಸು-ಬ್ಯಾನರ್ ದುಪ್ಪಳಿ ದುಪ್ಪಟ್ಟಾಗಿದೆ.
`ಯುಗಾದಿ ಅಂಗವಾಗಿ ಕೆಲ ಪ್ಲೆಕ್ಸು-ಬ್ಯಾನರ್ ತೆರವು ಮಾಡಲಾಗಿದೆ. ಫ್ಲೆಕ್ಸು-ಬ್ಯಾನರ್ ಅಳವಡಿಸಿದವರು ಪರವಾನಿಗೆ ಪಡೆದಿರಲಿಲ್ಲ’ ಎಂದು ತೆರವು ಕಾರ್ಯಾಚರಣೆಯಲ್ಲಿದ್ದವರು ತಿಳಿಸಿದರು. ಯಾವುದೇ ಫ್ಲೆಕ್ಸು-ಬ್ಯಾನರ್ ಹಾನಿಯಾಗಿಲ್ಲ. ಬೇಕಾದರೆ ಆ ಸಂಸ್ಥೆಯವರು ಅದನ್ನು ಮರಳಿ ಒಯ್ಯಬಹುದು ಎಂದು ಪ ಪಂ ಸಿಬ್ಬಂದಿ ಹೇಳಿದ್ದಾರೆ.





