ದೊಡ್ಡದಾಗಿ ಧ್ವನಿವರ್ಧಕ ಹಚ್ಚುವ ವಿಷಯದಲ್ಲಿ ಪೊಲೀಸರ ಜೊತೆ ಜಗಳ ಮಾಡಿ ಹೊಡೆದಾಟ ನಡೆಸಿದ ಪೊಲೀಸ್ ಸಿಬ್ಬಂದಿಯನ್ನು ಕಾರವಾರ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಆತನ ಮೂವರು ಸಹಚರರಿಗೂ ಜೈಲಿನ ದಾರಿ ತೋರಿಸಿದ್ದಾರೆ.
ಮಾರ್ಚ 31ರಂದು ನಸುಕಿನ 2.30ಕ್ಕೆ ಕಾರವಾರದ ಗುನಗಿವಾಡದಲ್ಲಿ ದೊಡ್ಡದಾಗಿ ಮೈಕ್ ಅಳವಡಿಸಲಾಗಿತ್ತು. ಗಿಂಡಿ ದೇವಸ್ಥಾನದ ಬಳಿಯ ಸದ್ದು ಕೇಳಿ ಅಲ್ಲಿ ಪೊಲೀಸರು ಧಾವಿಸಿದ್ದರು. 112 ವಾಹನದ ಜೊತೆ ಪಿಎಸ್‌ಐ ಗಜೇಂದ್ರ ಅವರು ಅಲ್ಲಿಗೆ ತೆರಳಿದ್ದರು. ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದರಿoದ ಧ್ವನಿವರ್ಧಕ ಬಂದ್ ಮಾಡುವಂತೆ ಅವರು ತಾಕೀತು ಮಾಡಿದರು. ಸ್ವತಃ ಮುಂದೆ ನಿಂತು ಧ್ವನಿವರ್ಧಕವನ್ನು ಬಂದ್ ಮಾಡಿಸಿದರು.
ಅದಾದ ನಂತರ ಮುಂದಿನ ಕರ್ತವ್ಯಕ್ಕೆ ತೆರಳುತ್ತಿದ್ದ ಪಿಎಸ್‌ಐ ಗಜೇಂದ್ರ ಅವರಿಗೆ ಕರಾವಳಿ ಕಾವಲುಪಡೆಯ ಪೊಲೀಸ್ ಸಿಬ್ಬಂದಿ ಕೃಷ್ಣಾನಂದ ಗುನಗಿ ಎದುರಾದರು. `ಧ್ವನಿವರ್ಧಕ ಹಚ್ಚಿದ ಬಗ್ಗೆ ದೂರು ನೀಡಿದವರು ಯಾರು?’ ಧ್ವನಿ ವರ್ಧಕ ಬಂದ್ ಮಾಡಿಸಿದ್ದು ಏಕೆ?’ ಎಂದು ಅವರು ಪ್ರಶ್ನಿಸಿದರು. `ನಾನು ಪೊಲೀಸ್ ಇದ್ದೇನೆ. ನನಗೂ ಕಾನೂನು ಗೊತ್ತಿದೆ’ ಎಂದು ಜೋರಾಗಿ ಮಾತನಾಡಿದರು. ಇದರೊಂದಿಗೆ ಅಲ್ಲಿದ್ದ ಇನ್ನಿತರರಿಗೂ `ಪೊಲೀಸರನ್ನು ಪ್ರಶ್ನಿಸಿ’ ಎಂದು ಪ್ರಚೋದನೆ ನೀಡಿದರು.
ಆಗ, ಅಲ್ಲಿದ್ದ ಜನ ಪೊಲೀಸ್ ವಾಹನವನ್ನು ಅಡ್ಡಗಟ್ಟಿದರು. ಪೊಲೀಸರ ಜೊತೆ ಜಗಳ ಮಾಡಿ ಕೆಟ್ಟದಾಗಿ ಬೈದರು. ಅದರಲ್ಲಿಯೂ ಮುಖ್ಯವಾಗಿ ಪ್ರದೀಪ ಶಿವಾ ಗುನಗಿ, ರಾಜೇಶ ಸುಧಾಕರ ಗುನಗಿ ಹಾಗೂ ಪ್ರದೀಪ ದುರ್ಗಿ ಗುನಗಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಮಾಡಿದರು. ಹೀಗಾಗಿ ಪೊಲೀಸರು ಆ ನಾಲ್ವರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದರು.
ನ್ಯಾಯಾಲಯವೂ ಆರೋಪಿತರಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಪೊಲೀಸರನ್ನು ಸೇರಿ ಸರ್ಕಾರಿ ನೌಕರರ ಮೇಲೆ ಹಲ್ಲೆ, ಕರ್ತವ್ಯಕ್ಕೆ ಅಡ್ಡಿ, ನಿಂದನೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವುದಾಗಿ ಪೊಲೀಸರು ಹೇಳಿದ್ದಾರೆ.