ಅಂಕೋಲಾದ ಪೂಜಗೇರಿಯಲ್ಲಿ ಮೀನು ಹಿಡಿಯಲು ಹಳ್ಳಕ್ಕೆ ತೆರಳಿದ್ದ ಚೋಳ್ಳಯ್ಯ ಖಾರ್ವಿ ಮೀನು ಬಲೆಯೊಂದಿಗೆ ನೀರಿನಲ್ಲಿ ಬಿದ್ದು ಸಾವನಪ್ಪಿದ್ದಾರೆ. ನೀರಿನಲ್ಲಿ ಬಿದ್ದು ಅಸ್ವಸ್ಥರಗೊಂಡ ಅವರನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಿಲ್ಲ.
ಅಂಕೋಲಾ ತಾಲೂಕಿನ ಬೆಳಂಬಾರ ಬಳಿಯ ಉತ್ತರಖಾರ್ವಿವಾಡದಲ್ಲಿ ಚೋಳ್ಳಯ್ಯ ಖಾರ್ವಿ ವಾಸವಾಗಿದ್ದರು. 71ನೇ ವಯಸ್ಸಿನಲ್ಲಿಯೂ ಅವರು ಲವಲವಿಕೆಯಿಂದ ಇದ್ದರು. ನಿತ್ಯ ಮೀನುಗಾರಿಕೆಗೆ ತೆರಳಿ ಅವರು ಜೀವನ ನಡೆಸುತ್ತಿದ್ದರು. ಮಾರ್ಚ 30ರಂದು ಮೀನು ಹಿಡಿಯುವುದಕ್ಕಾಗಿ ಅವರು ಪೂಜಗೇರಿ ಹಳ್ಳಕ್ಕೆ ಹೋಗಿದ್ದರು.
ಮೀನು ಹಿಡಿಯಲು ಬಲೆ ಬೀಸಿದ ಅವರಿಗೆ ಎದೆನೋವು ಕಾಣಿಸಿತು. ಆ ನೋವಿನಲ್ಲಿರುವಾಗಲೇ ಅವರು ಬಲೆಯೊಳಗೆ ಸಿಕ್ಕಿಬಿದ್ದರು. ಬಲೆ ಜೊತೆ ಅವರು ನೀರಿಗೆ ಬಿದ್ದರು. ಇದನ್ನು ನೋಡಿದ ಅಲ್ಲಿನ ಜನ ತಕ್ಷಣ ಚೋಳ್ಳಯ್ಯ ಖಾರ್ವಿ ಅವರ ರಕ್ಷಣೆಗೆ ಪ್ರಯತ್ನಿಸಿದರು. ಎಲ್ಲರೂ ಸೇರಿ ಚೋಳ್ಳಯ್ಯ ಖಾರ್ವಿ ಅವರನ್ನು ದಡಕ್ಕೆ ಕರೆತಂದರು. ಬಲೆಸಹಿತ ನೀರಿನಲ್ಲಿ ಬಿದ್ದು ಅಸ್ವಸ್ಥರಾಗಿದ್ದ ಅವರನ್ನು ಉಪಚರಿಸಿದರು.
ಅದಾದ ನಂತರ ಚೋಳಯ್ಯ ಖಾರ್ವಿ ಅವರನ್ನು ರಿಕ್ಷಾ ಮೂಲಕ ಆಸ್ಪತ್ರೆಗೆ ಕರೆತರಲಾಯಿತು. ಆಸ್ಪತ್ರೆ ವೈದ್ಯರು ಈಗಾಗಲೇ ಚೋಳ್ಳಯ್ಯ ಖಾರ್ವಿ ಸಾವನಪ್ಪಿರುವ ಬಗ್ಗೆ ಘೋಷಿಸಿದರು. ಈ ಬಗ್ಗೆ ಅವರ ಪುತ್ರ ತುಳಸಿದಾಸ ಖಾರ್ವಿ ಪೊಲೀಸ್ ಪ್ರಕರಣ ದಾಖಲಿಸಿ ಶವಪಡೆದರು.