ಕುಮಟಾ ಮೀನು ಮಾರುಕಟ್ಟೆ ಬಳಿ ಯಲ್ಲಾಪುರದ ಗುರುಮೋಹನ ಮಹಾಜನ್ ಎಂಬಾತರು ಸಾವನಪ್ಪಿದ್ದಾರೆ.
ಯಲ್ಲಾಪುರದ ಕಿರವತ್ತಿ ಬಳಿ ಗುರುಮೋಹನ ಮಹಾಜನ್ ವಾಸವಾಗಿದ್ದರು. ಚಿಂದಿ ಆಯುವ ಕೆಲಸ ಮಾಡಿಕೊಂಡಿದ್ದ ಅವರು ಕುಮಟಾಗೆ ಹೋಗಿ ಕೆಲಸ ಮಾಡುತ್ತಿದ್ದರು. ಹಲವು ದಿನಗಳಿಂದ ಕುಮಟಾ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಅವರು ಚಿಂದಿ ಆಯುವ ಕೆಲಸ ಮಾಡಿಕೊಂಡಿದ್ದರು.
ಗುರುಮೋಹನ ಮಹಾಜನ್ ಅವರು ದುಡಿದ ಬಹುಪಾಲು ಹಣವನ್ನು ಸರಾಯಿ ಅಂಗಡಿಗೆ ವ್ಯಯಿಸುತ್ತಿದ್ದರು. ಮಾರ್ಚ 29ರಂದು ಬೆಳಗ್ಗೆ 11 ಗಂಟೆಗೆ ಕುಮಟಾ ಮೀನು ಮಾರುಕಟ್ಟೆ ಬಳಿ ಆಗಮಿಸಿದ ಗುರುಮೋಹನ ಮಹಾಜನ್ ಅಲ್ಲಿಯೇ ವಿಶ್ರಾಂತಿ ಪಡೆದರು. ಅಲ್ಲಿನ ಲೇಡಿಸ್ ಟೇಲರ್ ಅಂಗಡಿಯ ಮೆಟ್ಟಿಲ ಮೇಲೆ ಮಲಗಿದ ಅವರು ಮತ್ತೆ ಮೇಲೆ ಏಳಲಿಲ್ಲ.
ಪರೀಕ್ಷಿಸಿದಾಗ ಗುರುಮೋಹನ ಮಹಾಜನ್ ಸಾವನಪ್ಪಿರುವುದು ಖಚಿತವಾಯಿತು. ಕಿಸೆಯಲ್ಲಿರುವ ಆಧಾರ್ ಕಾರ್ಡ ಪರಿಶೀಲಿಸಿದಾಗ ಸಾವನಪ್ಪಿದ ವ್ಯಕ್ತಿಯ ಗುರುತು ಪತ್ತೆಯಾಯಿತು. ಅದಾದ ನಂತರ ಅಲ್ಲಿನ ವ್ಯಾಪಾರಿ ಇಬ್ರಾಹಿಂ ಬೇಗ್ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.