ದಾoಡೇಲಿಯಲ್ಲಿ ಗಾಳಿ-ಮಳೆಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದ ಊರುಗಳಿಗೆ ಹೆಸ್ಕಾಂ ಸಿಬ್ಬಂದಿ ಶನಿವಾರ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ. ಮೊಸಳೆಗಳಿರುವ ನದಿಯಲ್ಲಿ ಸಾಹಸ ಮಾಡಿ ಅವರು ವಿದ್ಯುತ್ ಸಂಪರ್ಕ ನೀಡಿದ್ದಾರೆ.
ಸುರಿದ ಭಾರೀ ಪ್ರಮಾಣದ ಮಳೆಯಿಂದಾಗಿ ಕಾಳಿ ನದಿಯಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಅಪಾಯ ಅರಿತ ಹೆಸ್ಕಾಂ ಸಿಬ್ಬಂದಿ ತಕ್ಷಣ ಆ ಮಾರ್ಗದ ವಿದ್ಯುತ್ ಸರಬರಾಜು ಕಡಿತಗೊಳಿಸಿದ್ದರು. ಸಂಪರ್ಕ ಮರುಜೋಡಣೆಯಾಗದ ಕಾರಣ ದಾಂಡೇಲಿಯ ಬೊಮ್ಮನಳ್ಳಿ, ಕೇದಾಳ, ಕುಳಗಿ, ಅಂಬಿಕಾನಗರದ ವಿವಿಧ ಕಡೆ ವಿದ್ಯುತ್ ದೀಪ ಬೆಳಗುತ್ತಿರಲಿಲ್ಲ.
ರಾತ್ರಿ ಕತ್ತಲಿಗೆ ಬೆದರಿದ ಜನ ವಿದ್ಯುತ್ ಸಂಪರ್ಕ ಮರುಜೋಡಣೆಗೆ ಹೆಸ್ಕಾಂ ಮೇಲೆ ಒತ್ತಡ ತಂದಿದ್ದರು. ಕಾರ್ಯಾಚರಣೆಗಿಳಿದ ಹೆಸ್ಕಾಂ ಸಿಬ್ಬಂದಿ ಕಾಳಿ ನದಿಯಲ್ಲಿ ಬಿದ್ದ ವಿದ್ಯುತ್ ತಂತಿ ಮೇಲೆತ್ತುವ ಪ್ರಯತ್ನ ನಡೆಸಿದರು. ಆದರೆ, ವಿದ್ಯುತ್ ತಂತಿ ಸುಲಬವಾಗಿ ಮೇಲೆ ಬರಲಿಲ್ಲ. ಹೆಸ್ಕಾಂ ಬಳಿ ಬೋಟ್ ಸಹ ಇಲ್ಲದಿರುವುದರಿಂದ ಸಮಸ್ಯೆಯಾಗಿತ್ತು. ಈ ನಡುವೆ ಕಾಳಿ ನದಿಯಲ್ಲಿ ಮೊಸಳೆ ಕಾಣಿಸಿಕೊಂಡಿದ್ದು, ಅದಕ್ಕೂ ಅಳುಕದೇ ಹೆಸ್ಕಾಂ ನೌಕರರು ಕಾರ್ಯಾಚರಣೆ ಮುಂದುವರೆಸಿದರು.
ಸಿಬ್ಬAದಿಯ ಸಾಹಸ ನೋಡಿದ ಸಂತೋಷ್ ಎಂಬಾತರು ತಮ್ಮ ಬಳಿಯಿದ್ದ ರಿವರ್ ರಾಪ್ಟಿಂಗ್ ಬೋಟನ್ನು ನೀಡಿದರು. ನಿರಂತರ ಕಾರ್ಯಾಚರಣೆ ನಡೆಸಿದ ಪರಿಣಾಮ ಶನಿವಾರ ಅಂಬಿಕಾನಗರ ಹಾಗೂ ಸುತ್ತಲಿನ ಊರುಗಳಿಗೆ ವಿದ್ಯುತ್ ಸಂಪರ್ಕ ಸಾಧ್ಯವಾಯಿತು.