ಯಲ್ಲಾಪುರದ ಹುಟಕಮನೆಯಲ್ಲಿನ ಗುಡ್ಡ ಕಟಾವು ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. `ಕೆಲವರು ದ್ವೇಷ ಮನೋಭಾವನೆಯಿಂದ ತನ್ನ ಕೃಷಿ ಕಾಯಕಕ್ಕೆ ತೊಂದರೆ ಮಾಡುತ್ತಿದ್ದಾರೆ’ ಎಂದು ಅಲ್ಲಿ ಭೂಮಿ ಖರೀದಿಸಿದ ದೀಪಕ ನಾಯ್ಕ ಇದೀಗ ಹೇಳಿಕೆ ನೀಡಿದ್ದಾರೆ.
`ಹುಟಕಮನೆಯಲ್ಲಿ ಅವೈಜ್ಞಾನಿಕವಾಗಿ ಗುಡ್ಡ ಕುಸಿತ ನಡೆಸಿದ್ದರಿಂದ ಕುಸಿತದ ಆತಂಕ ಎದುರಾಗಿದೆ’ ಎಂದು ಸಂಶುದ್ಧೀನ್ ಮಾರಕರ್, ಮಂಜುನಾಥ ಭಟ್ಟ ಹಾಗೂ ಪ್ರೇಮಾನಂದ ನಾಯ್ಕ ಎಂಬಾತರು ತಕರಾರು ಅರ್ಜಿ ಸಲ್ಲಿಸಿದ್ದರು. ಮರ ಕಟಾವು, ಅರಣ್ಯ ಒತ್ತುವರಿ, ವಿದ್ಯುತ್ ಕಂಬ ಮುರಿತ, ಅಕ್ರಮ ಮಣ್ಣು ಸಾಗಾಟ ಸೇರಿ ಹಲವು ಆರೋಪಗಳನ್ನು ಮಾಡಿದ್ದರು. ಆದರೆ, ಈ ಎಲ್ಲಾ ಆರೋಪಗಳನ್ನು ದೀಪಕ ನಾಯ್ಕ ಅಲ್ಲಗಳೆದಿದ್ದಾರೆ. `ತಾವು ಕಾನೂನುಬದ್ಧವಾಗಿಯೇ ಕೃಷಿಭೂಮಿ ಕೆಲಸ ಮಾಡಿದ್ದು, ಸಂಬoಧಿಸಿದ ಎಲ್ಲಾ ದಾಖಲೆ ನೀಡಲು ಬದ್ಧ’ ಎಂದವರು ಹೇಳಿದ್ದಾರೆ.
ಹುಟಕಮನೆಯ ಸರ್ವೇ ನಂ 61ರಲ್ಲಿ ಒಟ್ಟು 4.27 ಎಕರೆ ಕ್ಷೇತ್ರವಿದ್ದು, ಅದರಲ್ಲಿ 1.10 ಎಕರೆ ಕ್ಷೇತ್ರವನ್ನು ಹಳವಳ್ಳಿಯ ದೀಪಕ ನಾಯ್ಕ ಖರೀದಿಸಿದ್ದಾರೆ. `ಕ್ಷೇತ್ರದ ಅಭಿವೃದ್ಧಿಗಾಗಿ ಗುಡ್ಡ ಸಮದಟ್ಟು ಮಾಡಲಾಗಿದ್ದು, ಇದರಿಂದ ಯಾರಿಗೂ ಸಮಸ್ಯೆಯಾಗಿಲ್ಲ’ ಎಂದವರು ಹೇಳಿದ್ದಾರೆ. `ತಾನು ಖರೀದಿಸಿದ್ದು 1.10 ಎಕರೆ ಕ್ಷೇತ್ರ ಮಾತ್ರ. ಉಳಿದ ಜಾಗ ತನ್ನದಲ್ಲ. ಅದಾಗಿಯೂ ಎಲ್ಲಾ ಪ್ರದೇಶದಲ್ಲಿಯೂ ತಾನೇ ಗುಡ್ಡ ಕೊರೆದಿದ್ದೇನೆ ಎಂಬ ರೀತಿ ಬಿಂಬಿಸಲಾಗಿದೆ. ತಾನು ಕೃಷಿ ಕೆಲಸಕ್ಕಾಗಿ ಅಗೆದ ಪ್ರದೇಶದಲ್ಲಿ ಪರಿಸರಕ್ಕೆ ಹಾನಿ ಆಗಿಲ್ಲ’ ಎಂದವರು ಸ್ಪಷ್ಠಪಡಿಸಿದ್ದಾರೆ.
`ಜಾಗ ಖರೀದಿ ಮುನ್ನ ಅಲ್ಲಿ ಗೇರು ಗಿಡಗಳು ಮಾತ್ರ ಇದ್ದು, ಅದನ್ನು ಕಟಾವು ಮಾಡಲಾಗಿದೆ. ಈ ಬಗ್ಗೆ ದಾಖಲೆಗಳನ್ನು ಕಾಯ್ದಿರಿಸಲಾಗಿದೆ. ನನ್ನ ಮಾಲಿಕತ್ವದ ಪ್ರದೇಶದಲ್ಲಿ ಇನ್ನಿತರ ಯಾವುದೇ ಮರ ಕಟಾವು ನಡೆದಿಲ್ಲ. ಇಲ್ಲಿ ಭೂ ಕುಸಿತವಾಗುವ ಯಾವ ಸಾಧ್ಯತೆಗಳು ಸಹ ಇಲ್ಲ’ ಎಂದವರು ಹೇಳಿದ್ದಾರೆ. `ಪದೇ ಪದೇ ತಕರಾರು ಅರ್ಜಿ ಸಲ್ಲಿಸುತ್ತಿರುವವರು ಸ್ಥಳೀಯರಲ್ಲ. ಅವರು ಪರ ಪ್ರದೇಶದವರಾಗಿದ್ದು, ಈ ಹಿಂದೆ ಸಲ ಸಾಕಷ್ಟು ಬಾರಿ ತನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಅವರ ವಿರುದ್ಧ ಈ ಹಿಂದೆ ತಾನು ಪೊಲೀಸ್ ದೂರು ಸಹ ನೀಡಿದ್ದೇನೆ’ ಎಂದು ದೀಪಕ ನಾಯ್ಕ ಹೇಳಿದ್ದಾರೆ. `ಗುಡ್ಡ ಕಟಾವು ವಿಷಯದಲ್ಲಿಯೂ ಅನಗತ್ಯ ಆರೋಪ ಮಾಡಲಾಗಿದ್ದು, ಅದನ್ನು ಎದುರಿಸಲು ಸಿದ್ಧ’ ಎಂದು ಹೇಳಿದ್ದಾರೆ.