ಕುಮಟಾದ ಎಣ್ಣೆಮುಡಿಯಲ್ಲಿ ಕೋಳಿ ಅಂಕ ನಡೆಯುತ್ತಿದ್ದು, ಪೊಲೀಸರನ್ನು ಕಂಡ ಜೂಜುಕೋರರು ಕೋಳಿಯ ಜೊತೆ ಓಡಿ ಪರಾರಿಯಾಗಿದ್ದಾರೆ. ಅದಾಗಿಯೂ ಇಬ್ಬರನ್ನು ಹಿಡಿದ ಪೊಲೀಸರು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.
ಅಂಕೋಲಾ ತಗಡಗೇರಿಯ ಜೋಗೇಶ ಗುನಗಾ ಹಾಗೂ ಕುಮಟಾ ಹಿರೆಗುತ್ತಿಯ ರಾಮದೇವ ಹಳ್ಳೇರ ಸೇರಿ ಎಣ್ಣೆಮುಡಿಯ ಸರ್ಕಾರಿ ಆಸ್ಪತ್ರೆ ಬಳಿ ಕೋಳಿ ಅಂಕ ಏರ್ಪಡಿಸಿದ್ದರು. ಅನೇಕರು ಈ ಜೂಜಾಟಕ್ಕೆ ಆಗಮಿಸಿದ್ದು, ಕೊಳಿ ಮೇಲೆ ಹಣ ಹೂಡಿದ್ದರು.
ಮಾರ್ಚ 27ರ ಸಂಜೆ ಈ ವಿಷಯ ಅರಿತು ಗೋಕರ್ಣ ಪಿಎಸ್‌ಐ ಶಶಿಧರ ಕೆ ಎಚ್ ಅಲ್ಲಿಗೆ ಧಾವಿಸಿದರು. ಪೊಲೀಸರನ್ನು ಕಂಡ ಜೂಜುಕೋರರು ಕೋಳಿಸಹಿತ ಅಲ್ಲಿಂದ ಪರಾರಿಯಾದರು. ಅದಾಗಿಯೂ, ಜೂಜುಕೋರರ ಬೆನ್ನಟ್ಟಿದ ಪೊಲೀಸರಿಗೆ ಜೋಗೇಶ ಗುನಗಾ ಹಾಗೂ ರಾಮದೇವ ಹಳ್ಳೇರ ಸಿಕ್ಕಿ ಬಿದ್ದರು.
ಅವರ ಬಳಿಯಿದ್ದ 200ರೂ ಹಣವನ್ನು ಪೊಲೀಸರು ವಶಕ್ಕೆಪಡೆದರು. ಜೊತೆಗೆ ಕೋಳಿ ಅಂಕಕ್ಕೆ ಬಳಸಿದ ಒಂದು ಹುಂಜವನ್ನು ಜಪ್ತು ಮಾಡಿದರು. ಎಷ್ಟೇ ಹುಡುಕಿದರೂ ಇನ್ನೊಂದು ಹುಂಜ ಸಿಗಲಿಲ್ಲ. ಓಡಿ ಹೋದವರ ಹೆಸರನ್ನು ಸಹ ಆ ಇಬ್ಬರು ಬಾಯ್ಬಿಡಲಿಲ್ಲ.
ನಿಯಮಾನುಸಾರ ಸಿಕ್ಕ ಕೋಳಿಯನ್ನು ಪೊಲೀಸರು ಹರಾಜು ಹಾಕಿ ಆ ಮೊತ್ತವನ್ನು ನ್ಯಾಯಾಲಯಕ್ಕೆ ಒಪ್ಪಿಸಿದರು. ಜೊತೆಗೆ ಸಿಕ್ಕಿಬಿದ್ದ ಆ ಇಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದರು.