ಯಲ್ಲಾಪುರ ತಾಲೂಕಿನ ಹುಟಕಮನೆ ಬಳಿಯಿದ್ದ ಗುಡ್ಡವನ್ನು ಹಳವಳ್ಳಿಯ ದೀಪಕ ನಾಯ್ಕ ಖರೀದಿಸಿದ್ದು, ಅವರು ಅಲ್ಲಿನ ಗುಡ್ಡ ಕೊರೆದಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಪದೇ ಪದೇ ತಕರಾರು ಅರ್ಜಿ ಸಲ್ಲಿಕೆಯಾಗುತ್ತಿದ್ದು, ಹುಟಕಮನೆ ಗ್ರಾಮಕ್ಕೆ ಹಗಲು-ರಾತ್ರಿ ಎನ್ನದೇ ವಿವಿಧ ಇಲಾಖೆ ಅಧಿಕಾರಿಗಳು ಭೇಟಿ ನೀಡುತ್ತಿದ್ದಾರೆ!
ದೀಪಕ ನಾಯ್ಕ ಅವರು ಖರೀದಿಸಿದ ಗುಡ್ಡ ಸಂಪೂರ್ಣ ಖಾಸಗಿ ಆಸ್ತಿ. ಹೀಗಾಗಿ ಕೃಷಿ ಕಾರ್ಯಕ್ಕಾಗಿ ಅಭಿವೃದ್ಧಿ ಮಾಡುವ ಹಕ್ಕು ಅವರಿಗಿದೆ. ಆದರೆ, ಅದರಿಂದ ಯಾರಿಗೂ ತೊಂದರೆಯಾಗದoತೆ ನೋಡಿಕೊಳ್ಳುವುದು ಸಹ ಅವರದ್ದೇ ಜವಾಬ್ದಾರಿ. ಹೀಗಾಗಿ ಬೇರೆಯವರಿಗೆ ತೊಂದರೆಯಾಗದ ಹಾಗೇ ನೋಡಿಕೊಳ್ಳುವುದಾಗಿ ಭರವಸೆ ನೀಡಿ ಅವರು ಕೆಲಸ ಶುರು ಮಾಡಿದ್ದಾರೆ. ಗುಡ್ಡ ಕೊರೆತದಿಂದ ಅಕ್ಕ-ಪಕ್ಕದ ತೋಟಗಳಿಗೂ ಮಣ್ಣು ನುಗ್ಗಿ ಹಾನಿಯಾಗುವ ಸಾಧ್ಯತೆಯಿದ್ದು, ಅಲ್ಲಿ ಹಾನಿಯಾಗದಂತೆ ನೋಡಿಕೊಳ್ಳುವುದಾಗಿ ದೀಪಕ ನಾಯ್ಕ ಸ್ಥಳೀಯರ ಮನವೊಲೈಸಿದ್ದಾರೆ. ಆದರೆ, ವೈಜ್ಞಾನಿಕವಾಗಿ ಗುಡ್ಡ ಕಟಾವು ನಡೆಸದಿರುವುದು ಸೇರಿ ಕೆಲ ನಿಯಮಗಳನ್ನು ಗಾಳಿಗೆ ತೂರಿ ಅವರು ಸಿಕ್ಕಿ ಬಿದ್ದಿದ್ದಾರೆ!
ಇದೇ ಕಾರಣದಿಂದ ಹುಟಕಮನೆಯಲ್ಲಿನ ಗುಡ್ಡ ಕಟಾವು ವಿಷಯವಾಗಿ ಸರ್ಕಾರಕ್ಕೆ ಪದೇ ಪದೇ ಅರ್ಜಿ ಸಲ್ಲಿಕೆಯಾಗುತ್ತಿದೆ. ಅರ್ಜಿಗಳ ಬಾರಕ್ಕೆ ಮಣಿದ ಅಧಿಕಾರಿಗಳು ಅರಣ್ಯ ಪ್ರದೇಶದಲ್ಲಿ ರಸ್ತೆ ನಿರ್ಮಿಸಿದ ಕಾರಣ ಎರಡು ಜೆಸಿಬಿ ಯಂತ್ರಗಳನ್ನು ವಶಕ್ಕೆಪಡೆದಿದ್ದಾರೆ. ಹಗಲು ರಾತ್ರಿ ಎನ್ನದೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. `ಜೆಸಿಬಿ ಮಾತ್ರ ವಶಕ್ಕೆಪಡೆದಿದ್ದು, ಮಣ್ಣು ಸಾಗಾಟ ನಡೆಸಿದ ಟಾಕ್ಟರ್ ವಶಕ್ಕೆಪಡೆದಿಲ್ಲ’ ಎನ್ನುವ ಬಗ್ಗೆ ಶುಕ್ರವಾರ ಅರಣ್ಯ ಇಲಾಖೆ ಹಾಗೂ ತಹಶೀಲ್ದಾರ್ ಕಚೇರಿಗೆ ಮತ್ತೊಂದು ಅರ್ಜಿ ಸಲ್ಲಿಕೆಯಾಗಿದೆ. ಹೀಗಾಗಿ ಗುಡ್ಡ ಕಟಾವು ಪ್ರಕರಣಕ್ಕೆ ಸಂಬoಧಿಸಿ ಅಧಿಕಾರಿಗಳ ಮೇಲೆ ಮತ್ತೆ ಒತ್ತಡ ಹೆಚ್ಚಾಗಿದೆ!
`ಮಾಲ್ಕಿ ಭೂಮಿಯ ಜೊತೆ ಅರಣ್ಯ ಭೂಮಿಯನ್ನು ಅಗೆಯಲಾಗಿದೆ’ ಎಂಬುದು ದೂರುದಾರರ ಆರೋಪ. `ಜೆಸಿಬಿ ಯಂತ್ರಗಳನ್ನು ವಶಕ್ಕೆಪಡೆದ ಅಧಿಕಾರಿಗಳು ಮಣ್ಣು ಸಾಗಾಟಕ್ಕೆ ಬಳಸಿದ ಟಾಕ್ಟರನ್ನು ವಶಕ್ಕೆಪಡೆಯಬೇಕು’ ಎಂಬುದು ದೂರುದಾರರ ಆಗ್ರಹ. `ಘಟ್ಟ ಪ್ರದೇಶದ ರಸ್ತೆಯನ್ನು ತಗ್ಗಿಸಿರುವುದನ್ನು ಬಿಟ್ಟರೆ ಅರಣ್ಯವನ್ನು ಅತಿಕ್ರಮಿಸಿಲ್ಲ’ ಎಂಬುದು ಭೂ ಮಾಲಕರ ಹೇಳಿಕೆ. ಅದಾಗಿಯೂ, ಮಾಲ್ಕಿ ಭೂಮಿಗೆ ತೆರಳಲು ರಸ್ತೆ ಇಲ್ಲ ಎಂದಾದರೆ ಭೂಮಿ ಮಾಲಕ ತಹಶೀಲ್ದಾರರಿಗೆ ಅರ್ಜಿ ಕೊಡಬೇಕು. ಆಗ, ಕಂದಾಯ ಅಧಿಕಾರಿಗಳೇ ಅಧಿಕೃತ ರಸ್ತೆ ವ್ಯವಸ್ಥೆ ಕಲ್ಪಿಸಿಕೊಡುತ್ತಾರೆ. ಅದಾಗಿಯೂ, ಅರಣ್ಯದಲ್ಲಿ ಹಾದುಹೋದ ರಸ್ತೆಯಲ್ಲಿ ಜೆಸಿಬಿ ಯಂತ್ರ ಬಳಕೆ ಮಾಡಿದ್ದರಿಂದ ಅಧಿಕಾರಿಗಳು ಕಾನೂನು ಕ್ರಮ ಜರುಗಿಸಿದ್ದಾರೆ.
ಇನ್ನೂ ದೀಪಕ ನಾಯ್ಕ ಅವರು ಖರೀದಿಸಿದ ಭೂಮಿಯಲ್ಲಿ ಲಕ್ಷಾಂತರ ರೂ ಮೌಲ್ಯದ ಮರಗಳಿದ್ದವು. ಆ ಮರಗಳ ಮೇಲೆ ಮಾಲ್ಕಿದಾರರಿಗೆ ಹಕ್ಕಿದ್ದು, ದಾಖಲೆಗಳ ಜೊತೆ ಒಂದೇ ಒಂದು ಅರ್ಜಿ ಸಲ್ಲಿಸಿದ್ದರೆ ಅರಣ್ಯ ಇಲಾಖೆಯೇ ಆ ಮರಗಳ ಕಟಾವು ನಡೆಸಿ ಹರಾಜು ಹಾಕುತ್ತಿತ್ತು. ಕೊನೆಗೆ ಆ ಹಣವನ್ನು ಭೂಮಿ ಮಾಲಕರ ಖಾತೆಗೆ ಜಮಾ ಮಾಡುತ್ತಿತ್ತು. ಆದರೆ, `ಇಲ್ಲಿ ಜೆಸಿಬಿ ಯಂತ್ರಗಳ ಮೂಲಕ ಆ ಮರಗಳನ್ನು ಕಿತ್ತು ಮಣ್ಣಿನ ಅಡಿಗೆ ಹಾಕಲಾಗಿದೆ’ ಎಂಬುದು ದೂರುದಾರರ ಆರೋಪ. ಲಕ್ಷಾಂತರ ರೂ ಬೆಲೆ ಬಾಳುವ ಮರಗಳಿದ್ದರೂ ಅದನ್ನು ಮಾರಾಟ ಮಾಡದೇ ತರಾತುರಿಯಲ್ಲಿ ಮಣ್ಣು ಮಾಡಿದ ಕಾರಣವೂ ಗೊತ್ತಾಗುತ್ತಿಲ್ಲ. `ಯಾವುದೇ ಸಾಗವಾನಿ ಮರ ಕಟಾವು ನಡೆಸಿಲ್ಲ. ಎಲ್ಲಾ ಮರಗಳು ಅಲ್ಲಿಯೇ ಇದೆ. ಮಾಲ್ಕಿ ಪ್ರದೇಶದಲ್ಲಿದ್ದ ಗೇರು ಮರಗಳನ್ನು ಮಾತ್ರ ಕಟಾವು ಮಾಡಲಾಗಿದೆ’ ಎಂಬುದು ದೀಪಕ ನಾಯ್ಕರ ಹೇಳಿಕೆ.
ಇನ್ನೂ ಸ್ಥಳದಲ್ಲಿದ್ದ ಹೆಸ್ಕಾಂ ವಿದ್ಯುತ್ ಕಂಬಗಳನ್ನು ನೆಲಕ್ಕುರುಳಿಸಲಾಗಿದೆ. ಗುಡ್ಡ ಕಟಾವು ಸ್ಥಳದಲ್ಲಿಯೇ ಕಂಬ ಕೊನೆಯಾಗಿದ್ದರಿಂದ ಊರಿನ ವಿದ್ಯುತ್ ಸಂಪರ್ಕ ಕಡಿತವಾಗಿಲ್ಲ. ಹೀಗಾಗಿ ಇದಕ್ಕೂ ಊರಿನವರು ತಕರಾರು ಸಲ್ಲಿಸಿಲ್ಲ. ಆದರೆ, ವಿದ್ಯುತ್ ಕಂಬ ಹೆಸ್ಕಾಂ ಆಸ್ತಿಯಾಗಿದ್ದು, ಅದಕ್ಕೆ ಹಾನಿಯಾಗಿದ್ದರಿಂದ ಹೆಸ್ಕಾಂ ಅಧಿಕಾರಿಗಳು ದಂಡ ಪಾವತಿಗೆ ಸೂಚಿಸಿದ್ದಾರೆ. ಅದನ್ನು ಭೂ ಮಾಲಕರು ಒಪ್ಪಿದ್ದಾರೆ.
ಕಳೆದ ಮರ‍್ನಾಲ್ಕು ದಿನಗಳಿಂದ ಯಲ್ಲಾಪುರದ ಹುಟಕಮನೆ ಗುಡ್ಡ ಭಾರೀ ಪ್ರಮಾಣದ ಚರ್ಚೆಯ ವಿಷಯವಾಗಿದೆ. ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಹೋರಾಟಗಾರರ ಸಮರದಿಂದ ಅಧಿಕಾರಿಗಳು ಹಾಗೂ ಸ್ಥಳೀಯರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಈ ಪ್ರಕರಣ ತಾತ್ವಿಕ ಅಂತ್ಯ ಕಾಣುವ ಲಕ್ಷಣಗಳಿಲ್ಲ.